ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ 14ರಂದು ದೆಹಲಿಗೆ ಬನ್ನಿ, ನವಜೋತ್ ಸಿಂಗ್ ಸಿಧುಗೆ ಹೈಕಮಾಂಡ್‌ ಪಕ್ಷ ಸೂಚನೆ

Last Updated 12 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ‘ನಿರ್ದಿಷ್ಟ’ವಾಗಿಪಕ್ಷದ ಕೆಲ ಆಂತರಿಕ ವಿಷಯಗಳನ್ನು ಚರ್ಚಿಸಬೇಕಿದ್ದು, ಗುರುವಾರ (ನ.14) ದೆಹಲಿಗೆ ಬರಬೇಕು ಎಂದು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌, ಪಂಜಾಬ್‌ ಕಾಂಗ್ರೆಸ್‌ ಘಟಕದ ಮುಖಂಡ ನವಜೋತ್ ಸಿಂಗ್‌ ಸಿಧು ಅವರಿಗೆ ಸೂಚಿಸಿದೆ.

ಸಿಧು ಅವರ ನಡೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬ ಅಭಿಪ್ರಾಯಗಳ ಹಿಂದೆಯೇ ಈ ಕರೆ ಹೋಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ರಾವತ್‌, ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಚರ್ಚಿಸಬೇಕು ಎಂದು ಸೂಚಿಸಲಾಗಿದೆ.

ಮುಖ್ಯಮಂತ್ರಿ ಚರಣಜಿತ್‌ ಸಿಂಗ್ ಚನ್ನಿ ಅವರ ಕೆಲವು ನಿರ್ಧಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸಿಧು ಅವರು ಸೆಪ್ಟೆಂಬರ್ 28ರಂದು ಪಂಜಾಬ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಈ ರಾಜೀನಾಮೆ ಪತ್ರ ಇನ್ನೂ ಅಂಗೀಕಾರವಾಗಿಲ್ಲ.

ಪಕ್ಷದ ಪಂಜಾಬ್ ಉಸ್ತುವಾರಿಯೂ ಆಗಿರುವ ಹರೀಶ್ ರಾವತ್ ಅವರು ಟ್ವೀಟ್‌ ಮೂಲಕ ಸಿಧು ಅವರಿಗೆ ಕರೆ ನೀಡಿದ್ದನ್ನು ಪ್ರಕಟಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಪಕ್ಷದ ಆಂತರಿಕ ಭಿನ್ನಮತ ಕುರಿತು ಚರ್ಚೆಗೆ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಸೇರುವ ಎರಡು ದಿನದ ಮೊದಲು ಈ ಸಭೆಯು ನಿಗದಿಯಾಗಿದೆ.

ಪಕ್ಷದ ಸಾಂಸ್ಥಿಕ ಬದಲಾವಣೆಗೆ ಒತ್ತಾಯಿಸಿ ಪತ್ರ ಬರೆದಿದ್ದ 23 ನಾಯಕರ ತಂಡದಲ್ಲಿದ್ದ ಗುಲಾಂ ನಬಿ ಆಜಾದ್‌ ಸೇರಿದಂತೆ ಹಲವರು ಅಮರಿಂದರ್ ಸಿಂಗ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೈಬಿಟ್ಟ ಕ್ರಮ ಕುರಿತಂತೆಈಗಾಗಲೇ ಬೇಸರ ವ್ಯಕ್ತಪಡಿಸಿದ್ದಾರೆ. ‘ಚುನಾಯಿತ ಅಧ್ಯಕ್ಷರೇ ಇಲ್ಲ. ಪಕ್ಷದಲ್ಲಿ ಯಾರು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದೇ ತಿಳಿದಿಲ್ಲ’ ಎಂದು ಕಪಿಲ್‌ ಸಿಬಲ್‌ ಹೇಳಿದ್ದರು.

ಪಂಜಾಬ್‌ ವಿಷಯ ಕುರಿತಂತೆ ಸಿಡಬ್ಲ್ಯೂಸಿ ಸಭೆಗೆ ಮೊದಲೇ ಸ್ಪಷ್ಟನೆ ನೀಡಲು ಪಕ್ಷದ ನಾಯಕತ್ವ ಉದ್ದೇಶಿಸಿದೆ. ಪಕ್ಷದ ಹಿತವೇ ಮುಖ್ಯ. ಸಿಧು ಅವರ ಅತಿರೇಕದ ವರ್ತನೆ ಸಹಿಸಲಾಗದು ಎಂಬ ಅಭಿಪ್ರಾಯವನ್ನು ಗಮನಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಸಿಧು ಅವರು ತಮ್ಮ ರಾಜೀನಾಮೆ ಕುರಿತಂತೆ ಟ್ವೀಟ್ ಮಾಡಿದ್ದರು. ಆದರೆ, ರಾಜೀನಾಮೆ ಪತ್ರವನ್ನು ಎಐಸಿಸಿಗೆ ನೀಡಿರಲಿಲ್ಲ. ನಿಗದಿತ ಅವಧಿಯಲ್ಲಿ ರಾಜೀನಾಮೆ ನಿರ್ಧಾರವನ್ನು ಹಿಂಪಡೆಯಬೇಕು ಎಂಬ ಸಂದೇಶವನ್ನು ಪಕ್ಷವು ಸಿಧು ಅವರಿಗೆ ರವಾನಿಸಿತ್ತು. ಆದರೆ, ಸಾರ್ವಜನಿಕವಾಗಿ ಅವರು ಈ ಕುರಿತು ನಿಲುವು ಪ್ರಕಟಿಸಿರಲಿಲ್ಲ.

ಸಿಧು ಅವರು ಮಣಿಯದಿದ್ದರೆ, ಅವರಷ್ಟಕ್ಕೆ ಅವರನ್ನು ಬಿಡುವ ತೀರ್ಮಾನಕ್ಕೂ ಕೇಂದ್ರ ನಾಯಕತ್ವ ಬಂದಿದೆ ಎಂದು ಹೇಳಲಾಗಿದೆ. ಸಿಧು ಅವರ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಹುಡುಕಾಟದಲ್ಲಿ ಪಕ್ಷ ಈಗಾಗಲೇ ನಿರತವಾಗಿದೆ. ಪಂಜಾಬ್‌ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಕುಲ್ಜಿತ್‌ ನಾಗ್ರಾ, ಸಂಸದ ರಣವೀತ್‌ ಬಿಟ್ಟು ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ.

ಅಮರಿಂದರ್ ಸಿಂಗ್‌ ಎದುರಾಗಿ ಸಿಧು ಅವರನ್ನು ಪಕ್ಷದ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ಬೆಂಬಲಿಸಿದ್ದರು. ಸಿಧು ತಮ್ಮ ನಡೆಯಿಂದ ಅವರನ್ನೇ ಮುಜುಗರ ಉಂಟು ಮಾಡಿದ್ದರು ಎಂದು ಪಕ್ಷದಕೇಂದ್ರ ನಾಯಕತ್ವ ಬೇಸರಗೊಂಡಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT