ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌: ಬಗೆಹರಿಯದ ನಾಯಕತ್ವ ಪ್ರಶ್ನೆ

Last Updated 24 ಆಗಸ್ಟ್ 2020, 18:50 IST
ಅಕ್ಷರ ಗಾತ್ರ

ಸೋನಿಯಾ ಗಾಂಧಿ ಅವರನ್ನು ಮುಂದಿನ ಆರು ತಿಂಗಳು ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರಿಸುವ ನಿರ್ಧಾರದೊಂದಿಗೆ ಸಿಡಬ್ಲ್ಯುಸಿ ಸಭೆಗೆ ತೆರೆ ಬಿದ್ದಿದೆ. ಭವಿಷ್ಯದಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಪ್ರಶ್ನೆ ಇನ್ನೂ ಹಾಗೆಯೇ ಉಳಿದುಕೊಂಡಿದೆ.

ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ನಾಯಕತ್ವದ ಬಗ್ಗೆ ನಾಯಕರಲ್ಲಿಭಿನ್ನಾಭಿಪ್ರಾಯಗಳಿರುವ ವಿಷಯವಂತೂ ಸ್ಪಷ್ಟವಾಗಿ ಗೋಚರಿಸಿದೆ.ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಆದಷ್ಟೂ ಬೇಗ ಹುಡುಕಿಕೊಳ್ಳುವಂತೆ ಸೋನಿಯಾ ಗಾಂಧಿ ಅವರು ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಈ ನಡುವೆ ಸೋನಿಯಾ ಉತ್ತರಾಧಿಕಾರಿಯಾಗಲು ರಾಹುಲ್‌ ಗಾಂಧಿ ಕೂಡ ಆಸಕ್ತಿ ತೋರಿಸಿಲ್ಲ. ಆದರೆ, ನೆಹರೂ–ಗಾಂಧಿ ಕುಟುಂಬಕ್ಕೆ ಸೇರದ ಒಮ್ಮತದ ವ್ಯಕ್ತಿಯೊಬ್ಬರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವಿಚಾರದಲ್ಲಿ ಇದುವರೆಗೂ ಯಾವುದೇ ಬೆಳವಣಿಗೆಗಳು ನಡೆದಿಲ್ಲ.ಪಕ್ಷದ ಹಿರಿಯ ನಾಯಕರು ಪತ್ರದಲ್ಲಿ ಪ್ರಸ್ತಾಪ ಮಾಡಿದ ನಾಯಕತ್ವ ಬದಲಾವಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ತೀರ್ಮಾನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೊರಬಿದ್ದಿದೆ. ಇದು ಪಕ್ಷದ ಕಾರ್ಯವೈಖರಿಯನ್ನಾದರೂ ಬದಲಾಯಿಸಬಹುದು ಎಂಬ ಸಣ್ಣದೊಂದು ಆಶಾ ಭಾವನೆ ಪತ್ರ ಬರೆದ ನಾಯಕರಲ್ಲಿದೆ.

ಮತ್ತೊಂದು ಮಹತ್ವದ ವಿಷಯವೆಂದರೆ, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದಲ್ಲಿಯ ಹಳೆ ತಲೆಮಾರಿನ ನಾಯಕರು ಮತ್ತು ಹೊಸ ತಲೆಮಾರಿನ ನಾಯಕರ ನಡುವಿನ ಕಂದಕ ಬಹಿರಂಗವಾಗಿದೆ. ಈ ಬೆಳವಣಿಗೆಯ ನಂತರ ಕಾಂಗ್ರೆಸ್‌ ನಾಯಕರನ್ನು ನೆಹರೂ–ಗಾಂಧಿ ಕುಟುಂಬದ ನಿಷ್ಠಾವಂತರು ಮತ್ತು ಭಿನ್ನಮತಿಯರು ಎಂಬ ಎರಡು ಗುಂಪಿನಲ್ಲಿ ಗುರುತಿಸಲಾಗುತ್ತಿದೆ. ಪತ್ರ ಬರೆಯುವ ಮೂಲಕ ಭಿನ್ನಮತೀಯರಾಗಿರುವ ನಾಯಕರಲ್ಲಿ ಎಲ್ಲ ಪ್ರದೇಶ ಮತ್ತು ಎಲ್ಲ ವಯೋಮಾನದವರೂ ಇದ್ದಾರೆ ಎನ್ನುವುದು ವಿಶೇಷ.

ಪತ್ರ ಬರೆದ ಎಲ್ಲ ನಾಯಕರೂ ಕಾರ್ಯಕಾರಿ ಸಭೆಯ ನಂತರ ಗುಲಾಂ ನಬಿ ಆಜಾದ್‌ ಅವರ ನಿವಾಸದಲ್ಲಿ ಸಭೆ ಸೇರಿದ್ದಾರೆ. ಆ ಮೂಲಕ ಪಕ್ಷದಳೊಗಿನ ಒಂದು ಗುಂಪು ಬದಲಾವಣೆಗೆ ಸಜ್ಜಾಗುತ್ತಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಸಿಡಬ್ಲ್ಯುಸಿ ಸಭೆ:ಪತ್ರ ಬಾಂಬ್ ಠುಸ್‌

‘ಪತ್ರ ಬಾಂಬ್‌’‍ ಬಗ್ಗೆ ಚರ್ಚಿಸಲು ಕರೆಯಲಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಏನಾದರೂ ಆಗಿದ್ದರೆ, ಅದು ಎಐಸಿಸಿ ಅಧಿವೇಶನ ಕರೆಯುವ ನಿರ್ಧಾರ ಮಾತ್ರ. ಅದೂ ತಕ್ಷಣಕ್ಕೇನೂ ಅಲ್ಲ, ಮುಂದಿನ ಆರು ತಿಂಗಳ ಅವಧಿಯಲ್ಲಿ.

ಪಕ್ಷದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಅಧ್ಯಕ್ಷರಿಗೆ ನೆರವಾಗಲು ಸಮಾಲೋಚನಾ ಪ್ರಕ್ರಿಯೆಯೊಂದನ್ನು ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಅಂತಹ ನಿರ್ಣಯವನ್ನೇನೂ ಅಂಗೀಕರಿಸಿಲ್ಲ.

ಇದಿಷ್ಟು ಬಿಟ್ಟರೆ, ಏಳು ತಾಸು ನಡೆದ ಸಭೆಯು ಯಥಾಪ್ರಕಾರ ಗಾಂಧಿ ಕುಟುಂಬದ ಕೆಲಸವನ್ನು (ಸಾಧನೆಯೇನೂ ಇಲ್ಲದಿರುವುದರಿಂದ) ವೈಭವೀಕರಿಸುವುದಕ್ಕೆ ಮುಗಿದು ಹೋಯಿತು. ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪಕ್ಷಕ್ಕಾಗಿ ಮಾಡಿದ ಕೆಲಸಗಳನ್ನು ಸುದೀರ್ಘವಾಗಿ ವಿವರಿಸಲಾಯಿತು.

‘ಅತ್ಯಂತ ಮುಖ್ಯವಾಗಿ, ನಮ್ಮ ಇಬ್ಬರು ನಾಯಕರ ಧ್ವನಿಯು ಕಾಂಗ್ರೆಸ್‌ನ ಒಳಗೆ ಮತ್ತು ಹೊರಗೆ ಭಾರತದ ತಲೆಮಾರಿಗೆ ಸ್ಫೂರ್ತಿ ನೀಡಿದೆ..’ ಎಂದು ಒಂದು ನಿರ್ಣಯ ಸಾಗುತ್ತದೆ. 489 ಪದಗಳ ನಿರ್ಣಯದಲ್ಲಿ ಬಹುಪಾಲು ಗಾಂಧಿ ಕುಟುಂಬದ ಗುಣಗಾನಕ್ಕೇ ಮೀಸಲು.

ಬದಲಾವಣೆಯು ರಾತ್ರಿ ಬೆಳಗಾಗುವಾಗ ಸಂಭವಿಸುವುದಿಲ್ಲ. ಹಾಗಿದ್ದರೂ, ಪತ್ರ ಬರೆದ 23 ಮುಖಂಡರು ಒತ್ತಾಯಿಸಿದಂತೆ, ಪಕ್ಷ ಸಂಘಟನೆಯೊಳಗೆ ಆಗಲೇಬೇಕಿರುವ ಸಮಗ್ರ ಬದಲಾವಣೆಗಳಿಗೆ ಒಂದು ಚೌಕಟ್ಟು ಹಾಕಿಕೊಳ್ಳುವ ತುರ್ತು ಕಾಣಿಸಿಕೊಳ್ಳಲೇ ಇಲ್ಲ. ಪಕ್ಷದಲ್ಲಿ ಸಮಗ್ರ ಬದಲಾವಣೆ ಆಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ ಕಾರಣಕ್ಕೆ ಸಿಡಬ್ಲ್ಯುಸಿ ಸಭೆ ನಡೆದಿತ್ತು. ಈಗ, ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಅವರು ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.

ಎರಡು ವಾರಗಳ ಹಿಂದೆಯೇ ಪತ್ರ ಬರೆಯಲಾಗಿದ್ದರೂ, ಪತ್ರದಲ್ಲಿರುವ ವಿಚಾರಗಳು ಮಾಧ್ಯಮದಲ್ಲಿ ಸೋರಿಕೆಯಾದ ಬಳಿಕವೇ ಸಭೆ ಕರೆಯಲು ನಾಯಕತ್ವವು ಮುಂದಾಯಿತು. ಪತ್ರ ಬರೆದ ಮುಖಂಡರ ಪೈಕಿ ಸಿಡಬ್ಲ್ಯುಸಿ ಸದಸ್ಯರಾಗಿರುವವರು ನಾಲ್ವರು ಮಾತ್ರ. ಹಾಗಾಗಿ, ಸೋನಿಯಾ–ರಾಹುಲ್‌ ಗಾಂಧಿ ನಿಷ್ಠಾವಂತರಿಗೇ ಸಭೆಯಲ್ಲಿ ಮೇಲುಗೈ ಆಯಿತು. ಏನೋ ಒಂದು ಚಿಂತನ–ಮಂಥನ ಆರಂಭವಾಗಬಹುದು ಎಂಬ ನಿರೀಕ್ಷೆ ಮತ್ತೆ ಹುಸಿಯೇ ಆಯಿತು.

ಪಕ್ಷದ ಸರ್ಕಾರ ಇರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಹಲವು ರಾಜ್ಯ ಘಟಕಗಳ ಬೆಂಬಲ ಪತ್ರವು ನಿಷ್ಠಾವಂತರ ಕೈಯಲ್ಲಿತ್ತು. ಸಭೆಯ ಬಳಿಕ, ಸಭೆಯ ಫಲಿತಾಂಶದ ಬಗ್ಗೆ ಪತ್ರ ಬರೆದವರಲ್ಲಿ ಪ್ರಮುಖರಾದ ಗುಲಾಂ ನಬಿ ಆಜಾದ್‌ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಯಾವ ಸನ್ನಿವೇಶದಲ್ಲಿ, ಯಾವ ಕಾರಣಗಳಿಗಾಗಿ ಪತ್ರ ಬರೆಯಲಾಗಿದೆ ಎಂಬುದನ್ನು ಸಭೆಯಲ್ಲಿ ವಿವರಿಸಲಾಗಿದೆ ಎಂದೂ ಹೇಳಿದ್ದಾರೆ.

51 ಸದಸ್ಯರು ಭಾಗಿಯಾಗಿದ್ದ ಸಿಡಬ್ಲ್ಯುಸಿ ಸಭೆಯು ಪತ್ರ ಬರೆದವರ ಬಗ್ಗೆ ಅಸಮಾಧಾನ ಹೊರಹಾಕಿತು ಮತ್ತು ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು. ಏನೇ ಆದರೂ ಆತ್ಮಾವಲೋಕನದ ರೀತಿಯ ಯಾವ ಸಂವಾದವೂ ನಡೆಯಲಿಲ್ಲ.

ಬಂಡಾಯ ಎದ್ದವರಿಗೆ ನಿರ್ಣಯದ ಮೂಲಕ ಪರೋಕ್ಷ ಎಚ್ಚರಿಕೆ ನೀಡುವ ಕೆಲಸವನ್ನು ಸಿಡಬ್ಲ್ಯುಸಿ ಮಾಡಿದೆ: ‘ಈಗಿನ ಸಂದರ್ಭದಲ್ಲಿ, ಪಕ್ಷ ಮತ್ತು ಅದರ ನಾಯಕತ್ವವನ್ನು ಯಾರೂ ದುರ್ಬಲಗೊಳಿಸಬಾರದು ಮತ್ತು ಅದಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಸಿಡಬ್ಲ್ಯುಸಿ ಸ್ಪಷ್ಟಪಡಿಸುತ್ತದೆ’ ಎಂಬುದೇ ಆ ನಿರ್ಣಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT