ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ನಡೆಸಲು ಕಾಂಗ್ರೆಸ್‌ ಚಿಂತನೆ: ಜೈರಾಮ್‌ ರಮೇಶ್‌

Last Updated 27 ಫೆಬ್ರುವರಿ 2023, 5:04 IST
ಅಕ್ಷರ ಗಾತ್ರ

ರಾಯಪುರ: ‘ಭಾರತ್ ಜೋಡೊ’ ಯಾತ್ರೆಯ ಯಶಸ್ಸಿನ ಬಳಿಕ ಅದೇ ರೀತಿಯ ಮತ್ತೊಂದು ಯಾತ್ರೆ ಹಮ್ಮಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ದೇಶದ ಪೂರ್ವ ಗಡಿಯಿಂದ ಪಶ್ಚಿಮ ಗಡಿಯವರೆಗೆ ಯಾತ್ರೆ ನಡೆಸುವ ವಿಚಾರ ವನ್ನು ಪಕ್ಷ ಪರಿಶೀಲಿಸುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ ತೀರದವರೆಗೆ ಯಾತ್ರೆ ಹಮ್ಮಿಕೊಳ್ಳುವ ಸಾಧ್ಯತೆಯಿದ್ದು, ಯಾತ್ರೆಯ ಸ್ವರೂಪವು ‘ಭಾರತ್ ಜೋಡೊ ಯಾತ್ರೆ’ಗಿಂತ ಭಿನ್ನವಾಗಿ ಇರಲಿದೆ ಎಂದು ಅವರು ಹೇಳಿದ್ದಾರೆ.

‘ಈ ಯಾತ್ರೆಗೆ ಹೆಚ್ಚಿನ ಸೌಕರ್ಯಗಳ ಅಗತ್ಯ ಇರುವುದಿಲ್ಲ ಹಾಗೂ ಕಡಿಮೆ ಸಂಖ್ಯೆಯ ಯಾತ್ರಾರ್ಥಿಗಳು ಇರಲಿದ್ದಾರೆ. ಇದು ಸಹ ಪಾದಯಾತ್ರೆ ರೂಪದಲ್ಲಿ ಇರಲಿದೆ. ಆದರೆ, ಯಾತ್ರೆ ಮಾರ್ಗದಲ್ಲಿ ಕಣಿವೆ, ಅರಣ್ಯ ಹಾಗೂ ನದಿಗಳು ಎದುರಾಗುತ್ತವೆ. ಹೀಗಾಗಿ ಯಾತ್ರೆಯು ಬಹುಮಾದರಿಯ ಸ್ವರೂಪದಲ್ಲಿ ಇರಲಿದೆ’ ಎಂದಿದ್ದಾರೆ. ಜೂನ್ ಅಥವಾ ನವೆಂಬರ್ ಬಳಿಕ ಯಾತ್ರೆ ಶುರುವಾಗುವ ಸಾಧ್ಯತೆಯಿದೆ.

‘ಭಾರತ್ ಜೋಡೊ’ ಯಾತ್ರೆ ರೀತಿಯ ಮತ್ತೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ರಾಹುಲ್ ಅಧಿವೇಶನದಲ್ಲಿ ಪಕ್ಷಕ್ಕೆ ಮನವಿ ಮಾಡಿದರು.

ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅದಾನಿ ಸಮೂಹವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಜೊತೆಗೆ ಹೋಲಿಸಿದ್ದಾರೆ. ಸತ್ಯ ಹೊರ ಬರುವವರೆಗೂ ಅದಾನಿ ಸಮೂಹದ ವ್ಯಾವಹಾರಿಕ ಚಟುವಟಿಕೆಗಳನ್ನು ಪಕ್ಷ ಪ್ರಶ್ನಿಸುತ್ತಲೇ ಇರುತ್ತದೆ ಎಂದಿದ್ದಾರೆ.

ಮಹಾಧಿವೇಶನದಲ್ಲಿ ಭಾನುವಾರ ಮಾತನಾಡಿದ ರಾಹುಲ್, ‘ಅದಾನಿಗೂ ಪ್ರಧಾನಿ ಅವರಿಗೂ ಇರುವ ಸಂಬಂಧ ವೇನು ಎಂದು ಸಂಸತ್ತಿನಲ್ಲಿ ನಾವು ಪ್ರಶ್ನೆ ಮಾಡಿದೆವು. ಆದರೆ ನಮ್ಮ ಇಡೀ ಭಾಷಣವನ್ನು ತೆಗೆದುಹಾಕಲಾಯಿತು. ಸತ್ಯ ಬಹಿರಂಗವಾಗುವವರೆಗೆ ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

‘ದೇಶದ ಎಲ್ಲ ಸಂಪತ್ತನ್ನು ಕೊಳ್ಳೆ ಹೊಡೆದ ಒಂದು ಕಂಪನಿಯ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಇತಿಹಾಸ ಮರುಕಳಿಸುತ್ತಿದೆ. ದೇಶದ ವಿರುದ್ಧ ಕಂಪನಿಯೊಂದು ಕೆಲಸ ಮಾಡುತ್ತಿದೆ. ಆ ಕಂಪನಿಯ ದೇಶವಿರೋಧಿ ಯತ್ನದ ವಿರುದ್ಧ ಇಡೀ ಪಕ್ಷ ನಿಲ್ಲಲಿದೆ’ ಎಂದು ಈಸ್ಟ್ ಇಂಡಿಯಾ ಕಂಪನಿ ಹಾಗೂ ಅದಾನಿ ಸಮೂಹವನ್ನು ಹೋಲಿಸಿ ರಾಹುಲ್ ಅವರು ಹೇಳಿದರು.

ಕ್ಷಮೆ ಕೇಳಿದ ಕಾಂಗ್ರೆಸ್: ಮಹಾ ಧಿವೇಶನದ ಕುರಿತು ನೀಡಲಾಗಿದ್ದ ಪತ್ರಿಕಾ ಜಾಹೀರಾತಿನಲ್ಲಿ ಭಾರತದ ಮೊದಲ ಶಿಕ್ಷಣ ಸಚಿವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಚಿತ್ರವನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಭಾನುವಾರ ಕ್ಷಮೆ ಯಾಚಿಸಿದೆ.

‘ಇದು ಕ್ಷಮಿಸಲಾಗದ ವಿಚಾರ. ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಟ್ವೀಟ್ ಮಾಡಿದ್ದಾರೆ.

ಮಹಾತ್ಮ ಗಾಂಧೀಜಿ, ಜವಾಹರ್‌ ಲಾಲ್ ನೆಹರೂ, ಸರ್ದಾರ್ ಪಟೇಲ್, ಬಿ.ಆರ್. ಅಂಬೇಡ್ಕರ್, ಸುಭಾಷ್‌ ಚಂದ್ರ ಬೋಸ್, ಲಾಲ್‌ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹ ರಾವ್ ಹಾಗೂ ಸರೋಜಿನಿ ನಾಯ್ಡು ಅವರ ಚಿತ್ರಗಳನ್ನು ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು. ಆದರೆ ಆಜಾದ್ ಅವರ ಚಿತ್ರ ಕೈಬಿಟ್ಟಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಆಜಾದ್ ಅವರದ್ದು ಸ್ಫೂರ್ತಿ ದಾಯಕ ವ್ಯಕ್ತಿತ್ವ. ಅವರು ಎಂದಿಗೂ ಸ್ಮರಣೀಯರು’ ಎಂದು ಕಾಂಗ್ರೆಸ್ ಹೇಳಿದೆ.

ಸೋನಿಯಾ ನಿವೃತ್ತಿ ವದಂತಿಗೆ ತೆರೆ
ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ ಎಂದು ಪಕ್ಷದ ನಾಯಕಿ ಅಲಕಾ ಲಾಂಬಾ ಅವರು ಭಾನುವಾರ‌ ಹೇಳಿದ್ದಾರೆ. ಮಹಾಧಿವೇಶನದಲ್ಲಿ ಸೋನಿಯಾ ಅವರು ಶನಿವಾರ ಮಾಡಿದ್ದ ಭಾಷಣವು ನಿವೃತ್ತಿಯ ಚರ್ಚೆಯನ್ನು ಹುಟ್ಟುಹಾಕಿತ್ತು.

ಮಹಾಧಿವೇಶನದಲ್ಲಿ ಮಾತನಾಡಿದ ಲಾಂಬಾ, ‘ಮಾಧ್ಯಮಗಳು ನಿವೃತ್ತಿಯ ಬಗ್ಗೆ ಚರ್ಚಿಸುತ್ತಿರುವ ವಿಚಾರವನ್ನು ಸೋನಿಯಾ ಅವರ ಗಮನಕ್ಕೆ ತಂದೆ. ಆದರೆ, ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂಬುದನ್ನು ಅವರು ತಿಳಿಸಿದರು’ ಎಂದು ಲಾಂಬಾ ಹೇಳಿದರು. ಲಾಂಬಾ ಅವರು ಈ ಮಾತು ಹೇಳುತ್ತಿದ್ದಾಗ ಸೋನಿಯಾ ಅವರು ಸಭೆಯಲ್ಲಿ ಉಪ‌ಸ್ಥಿತರಿದ್ದರು.

‘ಸೋನಿಯಾ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ನಮ್ಮ ಜತೆ ಇರಲಿದೆ. ಅವರಿಗೆ ಧನ್ಯವಾದ. ನಿವೃತ್ತಿಯ ವಿಚಾರಕ್ಕೆ ಪ್ರಚಾರ ಕೊಡಬೇಡಿ ಎಂದು ಮಾಧ್ಯಮಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಲಾಂಬಾ ಹೇಳಿದ್ದಾರೆ.

ಅದಾನಿ: ಪ್ರತಿಭಟನೆಗೆ ನಿರ್ಧಾರ
ಮುಂದಿನ ಮೂರು ತಿಂಗಳಲ್ಲಿ ಅದಾನಿ ಸಮೂಹದ ವಿರುದ್ಧ ಸರಣಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಮಹಾಧಿವೇಶನ ನಿರ್ಧರಿಸಿದೆ. ಕೇಂದ್ರ ಸರ್ಕಾರ ಬೆಂಬಲಿಸುತ್ತಿರುವ ಎಲ್ಲ ರೀತಿಯ ಸ್ವಜನ ಪಕ್ಷಪಾತ ನಿಲುವುಗಳ ಬಗ್ಗೆ ಜನಜಾಗೃತಿ ಮೂಡಿಸಲು ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

* ಮಾರ್ಚ್ 6: ದೇಶದಾದ್ಯಂತ ಎಸ್‌ಬಿಐ ಹಾಗೂ ಎಲ್‌ಐಸಿ ತಾಲ್ಲೂಕು ಮಟ್ಟದ ಕಚೇರಿಗಳ ಎದುರು ಪ್ರತಿಭಟನೆ
* ಮಾರ್ಚ್ 13: ದೇಶದಾದ್ಯಂತ ರಾಜಭವನಗಳಿಗೆ ಘೇರಾವ್
* ಮಾರ್ಚ್ ಕೊನೆ–ಏಪ್ರಿಲ್‌ನಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ‘ಪರ್ದಾ ಫಾಸ್‌’ (ಮುಖವಾಡ ಕಳಚಿ) ಪ್ರತಿಭಟನೆ

**

ನಮ್ಮ ಮುಂದೆ ಇಂದು ಹಲವು ಸವಾಲುಗಳಿವೆ. ಒಗ್ಗಟ್ಟು, ಶಿಸ್ತು ಹಾಗೂ ದೃಢತೆ ಇಂದಿನ ಅಗತ್ಯ. ಮಹಾಧಿವೇಶನವು ‘ಹೊಸ ಕಾಂಗ್ರೆಸ್‌’ನ ಆರಂಭಕ್ಕೆ ನಾಂದಿ ಹಾಡಿದೆ.
–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

**
ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಛತ್ತೀಸಗಡದ ಕಾಂಗ್ರೆಸ್ ಮುಖಂಡ ರನ್ನು ಬೆದರಿಸಲಾಗುತ್ತಿದೆ. ರಾಜ್ಯದ ಬೆಳವಣಿಗೆಯನ್ನು ಕೇಂದ್ರ ಸಹಿಸುತ್ತಿಲ್ಲ.
–ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT