ಮಹಿಳೆಗೆ ಮನ್ನಣೆ: ಪ್ರತ್ಯೇಕ ಪ್ರಣಾಳಿಕೆ; ಪ್ರಿಯಾಂಕಾ ಭರವಸೆ

ಲಖನೌ (ಪಿಟಿಐ): ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ರಚಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಶೇ 40ರಷ್ಟು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕೆ ಇಳಿಸಲಾಗುವುದು ಎಂದು ಪ್ರಿಯಾಂಕಾ ಅವರು ಕಳೆದ ತಿಂಗಳು ಘೋಷಿಸಿದ್ದರು. ಶೇ 50ರಷ್ಟಿರುವ ಮಹಿಳೆಯರನ್ನು ಅಧಿಕಾರದ ಪೂರ್ಣ ಪ್ರಮಾಣದ ಪಾಲುದಾರರನ್ನಾಗಿ ಮಾಡುವುದು ಇದರ ಉದ್ದೇಶ ಎಂದು ಅವರು ಹೇಳಿದ್ದರು.
‘ಉತ್ತರ ಪ್ರದೇಶದ ನನ್ನ ಪ್ರೀತಿಯ ಸಹೋದರಿಯರೇ, ನಿಮ್ಮ ಪ್ರತಿ ದಿನವೂ ಸಂಘರ್ಷವೇ ಆಗಿದೆ. ಇದನ್ನು ಅರ್ಥ ಮಾಡಿಕೊಂಡೇ ಕಾಂಗ್ರೆಸ್ ಪಕ್ಷವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ತಯಾರಿಸುವ ನಿರ್ಧಾರ ಕೈಗೊಂಡಿತು’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ಪಕ್ಷವು ನೀಡಿರುವ ಭರವಸೆಗಳ ಪಟ್ಟಿಯನ್ನೂ ಪ್ರಿಯಾಂಕಾ ಅವರು ಟ್ವೀಟ್ ಮಾಡಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳಿಗೆ ₹10 ಸಾವಿರ ಗೌರವಧನ, ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಶೇ 40ರಷ್ಟು ಹುದ್ದೆಗಳಿಗೆ ಮಹಿಳೆಯರ ನೇಮಕ, ವಿಧವೆಯರಿಗೆ ₹1,000 ಮಾಶಾಸನ, ವೀರ ವನಿತೆಯರ ಹೆಸರಿನಲ್ಲಿ ರಾಜ್ಯದಲ್ಲಿ 75 ಕೌಶಲ ಶಾಲೆಗಳ ಸ್ಥಾಪನೆ ಕಾಂಗ್ರೆಸ್‌ನ ಭರವಸೆಗಳಲ್ಲಿ ಸೇರಿವೆ.
ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಹೇಳಿಕೊಳ್ಳುವಂತಹ ನೆಲೆಯೇನೂ ಇಲ್ಲ. ರಾಜ್ಯದ ಉಸ್ತುವಾರಿಯಾಗಿರುವ ಪ್ರಿಯಾಂಕಾ ಅವರು ಪಕ್ಷವನ್ನು ಪುನಶ್ಚೇತನಗೊಳಿಸುವ ಅಸಾಧಾರಣ ಹೊಣೆಯನ್ನು ವಹಿಸಿಕೊಂಡಿದ್ಧಾರೆ. ಮಹಿಳಾ ಮತದಾರರ ಓಲೈಕೆಯ ಕಾರ್ಯತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ.
ಅಖಿಲೇಶ್ ಸ್ಪರ್ಧೆ ಇಲ್ಲವೇ?
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಆಜಂಗಡದ ಸಂಸದರಾಗಿರುವ ಅಖಿಲೇಶ್ ಅವರು, ಹಿಂದೆ ಯಾವತ್ತೂ ವಿಧಾನಸಭೆಗೆ ಸ್ಪರ್ಧಿಸಿಲ್ಲ. 2012–17ರ ಅವಧಿಯಲ್ಲಿ ಅಖಿಲೇಶ್ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ವಿಧಾನಸಭೆಗೆ ಸ್ಪರ್ಧಿಸದಿರಲು ಅವರು ಯಾವುದೇ ಕಾರಣ ಕೊಟ್ಟಿಲ್ಲ.
ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ ಎಂಬ ಅವರ ಹೇಳಿಕೆ ಪ್ರಕಟವಾಗುತ್ತಿದ್ದಂತೆಯೇ ಪಕ್ಷವು ಸ್ಪಷ್ಟೀಕರಣ ನೀಡಿದೆ. ಅಖಿಲೇಶ್ ಅವರು ಸ್ಪರ್ಧಿಸುವುದಿಲ್ಲ ಎಂಬ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ. ಈ ಬಗ್ಗೆ ಪಕ್ಷವು ತೀರ್ಮಾನ ಕೈಗೊಳ್ಳಲಿದೆ ಎಂದು ಎಸ್‌ಪಿ ಹೇಳಿದೆ.
ಅಖಿಲೇಶ್ ಅವರು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಸಿ) ಜತೆಗಿನ ಚುನಾವಣಾ ಮೈತ್ರಿಯನ್ನು ಅಂತಿಮಗೊಳಿಸಿದ್ದಾರೆ. ಸೀಟು ಹಂಚಿಕೆಯು ಸದ್ಯವೇ ಅಂತಿಮಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಎಸ್‌ಪಿ ಬಿಟ್ಟು ಹೋಗಿ ‘ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ’ ಎಂಬ ಪಕ್ಷ ಸ್ಥಾಪಿಸಿರುವ ಅಖಿಲೇಶ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಅವರಿಗೆ ಪಕ್ಷದಲ್ಲಿ ಸೂಕ್ತ ಗೌರವ ಸಿಗಲಿದೆ ಎಂದೂ ಅಖಿಲೇಶ್ ಅವರು ಹೇಳಿದ್ದಾರೆ.
ಕೇಂದ್ರ ಕೃಷಿ ಕಾಯ್ದೆಗಳ ವಿಚಾರದಲ್ಲಿ ಎಸ್‌ಪಿ ಮತ್ತು ಆರ್‌ಎಲ್‌ಡಿ ಒಂದೇ ನಿಲುವನ್ನು ಹೊಂದಿವೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಆರ್‌ಎಲ್‌ಡಿ ರೈತರ ಬೆಂಬಲ ಹೊಂದಿದೆ. ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಜತೆಗೂ ಎಸ್‌ಪಿ ಮೈತ್ರಿ ಮಾಡಿಕೊಂಡಿದೆ.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಎಂಬ ಬಿರುಗಾಳಿ ಎದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಲು ಈ ಬಿರುಗಾಳಿಯು ನೆರವಾಗಲಿದೆ.
ಅಜಯಕುಮಾರ್ ಲಲ್ಲು, ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.