ಗುರುವಾರ , ಜೂನ್ 30, 2022
21 °C
ಜಿತಿನ್ ಪ್ರಸಾದ್ ರಾಜೀನಾಮನೆ ಬೆನ್ನಲ್ಲೇ ಕಾಂಗ್ರೆಸ್‌ ವರಿಷ್ಠರಿಗೆ ಸಲಹೆ

ಪಕ್ಷದಲ್ಲಿ ನಾಯಕರ ಸೈದ್ಧಾಂತಿಕ ಬದ್ಧತೆ ಪರಿಶೀಲನೆ ಅಗತ್ಯ: ಎಂ.ವೀರಪ್ಪ ಮೊಯಿಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪಕ್ಷದಲ್ಲಿ ಮುಖಂಡರಿಗೆ ಪ್ರಮುಖ ಹುದ್ದೆ, ಜವಾಬ್ದಾರಿಯನ್ನು ನೀಡುವ ವೇಳೆ ಪಕ್ಷದ ತತ್ವ–ಸಿದ್ಧಾಂತದ ಬಗ್ಗೆ ಅವರಲ್ಲಿನ ಬದ್ಧತೆಯನ್ನು ಪರಿಶೀಲಿಸಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ವೀರಪ್ಪ ಮೊಯಿಲಿ ಗುರುವಾರ ಹೇಳಿದ್ದಾರೆ.

ಜಿತಿನ್ ಪ್ರಸಾದ್ ಅವರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಮರುದಿನವೇ ಮೊಯಿಲಿ ಅವರಿಂದ ಈ ಅಭಿಪ್ರಾಯ ಹೊರಬಿದ್ದಿದೆ.

‘ಕಾಂಗ್ರೆಸ್‌ ಪಕ್ಷಕ್ಕೆ ‘ದೊಡ್ಡ ಶಸ್ತ್ರಚಿಕಿತ್ಸೆ’ಯ ಅಗತ್ಯವಿದೆ. ಕೇವಲ ವಂಶಪಾರಂಪರ್ಯವನ್ನು ಪರಿಗಣಿಸಿ ಮುಖಂಡರಿಗೆ ಮಣೆ ಹಾಕುವುದನ್ನು ನಿಲ್ಲಿಸಬೇಕು’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಜಿತಿನ್‌ ಪ್ರಸಾದ್‌ ನೇತೃತ್ವದಲ್ಲಿಯೇ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಯಿತು. ಪಕ್ಷಕ್ಕೆ ಒಂದೇ ಒಂದು ಸ್ಥಾನ ಸಿಗಲಿಲ್ಲ.  ಅವರು ಅಸಮರ್ಥರು ಎಂಬುದನ್ನು ಇದು ಸಾಬೀತುಪಡಿಸಿತ್ತು’ ಎಂದು ಹೇಳಿದ್ದಾರೆ.

‘ಜಿತಿನ್‌ ಪ್ರಸಾದ್‌ ಅವರಿಗೆ ಪಕ್ಷಕ್ಕಿಂತ ವೈಯಕ್ತಿಕ ಮಹತ್ವಾಕಾಂಕ್ಷೆಯೇ ಮುಖ್ಯವಾಗಿತ್ತು. ಪಕ್ಷದ ತತ್ವ–ಸಿದ್ಧಾಂತದ ಬಗೆಗಿನ ಇವರ ಬದ್ಧತೆ ಬಗ್ಗೆ ಮೊದಲಿನಿಂದಲೂ ಸಂಶಯ ಇತ್ತು’ ಎಂದೂ ಆರೋಪಿಸಿದರು.

‘ಅರ್ಹತೆ ಇಲ್ಲದವರನ್ನು ನಾಯಕರನ್ನಾಗಿ ಮಾಡಬಾರದು. ಪಕ್ಷದಲ್ಲಿರುವ ಮುಖಂಡರ ಕುರಿತು ವರಿಷ್ಠರು ಸಮರ್ಪಕ ಮೌಲ್ಯಮಾಪನ ಮಾಡುವುದು ಅಗತ್ಯ. ಪಕ್ಷದ ಮರುಸಂಘಟನೆಯಾಗಬೇಕು. ಪ್ರಮುಖ ಹುದ್ದೆಗಳಲ್ಲಿ ಸಮರ್ಥರನ್ನೇ ನೇಮಕ ಮಾಡಬೇಕು. ಪಕ್ಷವು ಆತ್ಮಾವಲೋಕನ ನಡೆಸಬೇಕು. ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಒಂದು ಪಾಠವಾಗಬೇಕು’ ’ ಎಂದೂ ಮೊಯಿಲಿ ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು