ಮಂಗಳವಾರ, ಅಕ್ಟೋಬರ್ 19, 2021
23 °C

ಉತ್ತರ ಪ್ರದೇಶ ಕಾಂಗ್ರೆಸ್‌ ಉಪಾಧ್ಯಕ್ಷ ಎಸ್‌ಪಿ ಸೇರ್ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ಗಾಯದೀನ್ ಅನುರಾಗಿ ಅವರು ಶುಕ್ರವಾರ ಪಕ್ಷ ತೊರೆದು, ಸಮಾಜವಾದಿ ಪಕ್ಷ ಸೇರಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲೇ ತಮ್ಮ ಪಕ್ಷಕ್ಕೆ ವಿದಾಯ ಹೇಳಿರುವ ಅನುರಾಗಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಪಕ್ಷ ಸೇರಿದರು. ‘ಕಾಂಗ್ರೆಸ್‌ನಲ್ಲಿ ನಮ್ಮ ಧ್ವನಿಗೆ ಬೆಲೆ ಇಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಪ್ರಯತ್ನಿಸುತ್ತಿದ್ದರೂ ಹಿರಿಯ ನಾಯಕರು ಪಕ್ಷ ತೊರೆಯುತ್ತಿರುವ ಬೆಳವಣಿಗೆ ಮುಂದುವರಿದಿದೆ. ಪ್ರಿಯಾಂಕಾ ಅವರು ಪಕ್ಷವು ಚುನಾವಣೆಗೆ ಮಾಡಿಕೊಂಡಿರುವ ಸಿದ್ಧತೆ ಪರಿಶೀಲಿಸಲು ಹಮ್ಮಿಕೊಂಡಿದ್ದ ಐದು ದಿನಗಳ ರಾಜ್ಯ ಪ್ರವಾಸವನ್ನು ಶುಕ್ರವಾರವಷ್ಟೇ ಪೂರ್ಣಗೊಳಿಸಿದ್ದರು.

ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ದಿವಂಗತ ಕಮಲಪತಿ ತ್ರಿಪಾಠಿಯವರ ಮೊಮ್ಮಗ ಲಲಿತೇಶ್ ಪತಿ ತ್ರಿಪಾಠಿ ಇತ್ತೀಚೆಗಷ್ಟೇ ಪಕ್ಷಕ್ಕೆ ವಿದಾಯ ಹೇಳಿದ್ದರು. ಕಾಂಗ್ರೆಸ್‌ನ ಮಾಜಿ ನಾಯಕ ಜಿತೇಂದ್ರ ಪ್ರಸಾದ್ ಅವರ ಪುತ್ರ, ಕೇಂದ್ರದ ಮಾಜಿ ಸಚಿವ ಜಿತಿನ್ ಪ್ರಸಾದ ಅವರು ಬಿಜೆಪಿ ಸೇರಿದ ಕೆಲವು ತಿಂಗಳ ನಂತರ ಕಾಂಗ್ರೆಸ್‌ ನಾಯಕರ ಪಕ್ಷ ತೊರೆಯುವ ಬೆಳವಣಿಗೆ ಮುಂದುವರಿದಿದೆ.

ಜನ ಪರಿವರ್ತನಾ ದಳದ ಅಧ್ಯಕ್ಷ ಜೆ.ಪಿ. ಧಂಗರ್ ಅವರು ತಮ್ಮ ಪಕ್ಷ ಸಮಾಜವಾದಿ ಪಕ್ಷದೊಂದಿಗೆ ವಿಲೀನಗೊಳಿಸುವುದಾಗಿ ಇದೇ ಸಂದರ್ಭ ಘೋಷಿಸಿದರು.

ಎಸ್‌ಪಿಗೆ ಸೇರಿದ ಪ್ರಮುಖರಲ್ಲಿ ದಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಭಾರತೀಯ, ಬಲರಾಂಪುರದ ಮಾಜಿ ಸಂಸದ ರಿಜ್ವಾನ್ ಜಹೀರ್, ಮಾಜಿ ಶಾಸಕರಾದ ಆರ್.ಪಿ. ಕುಶ್ವಾಹ ಮತ್ತು ವಿನೋದ್ ಚತುರ್ವೇದಿ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು