ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿರ್ಮೂಲನೆಗೆ ಕಾಂಟ್ಯಾಕ್ಟ್ ಟ್ರೇಸಿಂಗ್: ಲೆಫ್ಟಿನೆಂಟ್ ಜನರಲ್ ರಾಜು

ಕಾಶ್ಮೀರದಲ್ಲಿ ಸೇನೆಯಿಂದ ಹೊಸ ತಂತ್ರ
Last Updated 13 ಸೆಪ್ಟೆಂಬರ್ 2020, 14:45 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಯುವಜನರನ್ನು ಭಯೋತ್ಪಾದನೆಯಿಂದ ವಿಮುಖರನ್ನಾಗಿಸಲು ಭಾರತೀಯ ಸೇನೆಯು ‘ಕಾಂಟ್ಯಾಕ್ಟ್ ಟ್ರೇಸಿಂಗ್’ ಎನ್ನುವ ವಿನೂತನ ತಂತ್ರಕ್ಕೆ ಮೊರೆಹೋಗಿದೆ.

‘ಭಯೋತ್ಪಾದನಾ ಸಂಘಟನೆಗಳ ಜೊತೆ ನಂಟು ಹೊಂದಿರುವ ಕಾಶ್ಮೀರದ ಕೆಲ ಯುವಕರು, ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಬಂದೂಕು ಹಿಡಿಯದಂತೆ ತಡೆಯಲು ‘ಕಾಂಟ್ಯಾಕ್ಟ್ ಟ್ರೇಸಿಂಗ್’ ಅಡಿಯಲ್ಲಿ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದರ ಜತೆಗೆ ಭಯೋತ್ಪಾದನೆ ಸಂಘಟನೆಯಲ್ಲಿ ತೊಡಗಿರುವ ಯುವಕರಿಗೆ ಅವರ ಕುಟುಂಬಗಳೊಂದಿಗೆ ಸಂಪರ್ಕ ಕಲ್ಪಿಸಿ, ಸಮಾಲೋಚನೆ (ಕೌನ್ಸೆಲಿಂಗ್‌) ಮಾಡಲಾಗುತ್ತಿದೆ.

‘ದಾರಿತಪ್ಪಿರುವ ಯುವಕರಿಗೆಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಕೆಟ್ಟದಾರಿಯಿಂದ ಹೊರಗೆ ತರಲು ಸಾಧ್ಯವಿದೆ’ ಎಂದು ಕಾಶ್ಮೀರದ ಎಕ್ಸ್‌ವಿ ಕಾರ್ಪ್ ಕಾರ್ಯಾಚರಣೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅಭಿಪ್ರಾಯಪಡುತ್ತಾರೆ.

‘ಭಯೋತ್ಪಾದನೆಯ ಸರಪಳಿಯನ್ನು ಮುರಿಯುವುದರಲ್ಲಿ ಸೇನೆ ನಂಬಿಕೆ ಇರಿಸಿಕೊಂಡಿದೆ. ಈ ನಿಟ್ಟಿನಲ್ಲಿ ನಮ್ಮ ತಂಡವು ಮುಂಚಿನಿಂದಲೂ ಕಾರ್ಯಾಚರಣೆಯಲ್ಲಿ ತೊಡಿಗಿಸಿಕೊಂಡಿದೆ’ ಎನ್ನುತ್ತಾರೆ ಅವರು.

‘ವಿಕ್ಟರ್ ಫೋರ್ಸ್‌’ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ರಾಜು ಅವರು ನಡೆಸಿದ ಇಂಥ ಪ್ರಯತ್ನಗಳು ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಯಶಸ್ವಿ ಫಲಿತಾಂಶ ನೀಡಿವೆ.

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದನಾ ಸಂಘಟನೆಗಳು ನಡೆಸುತ್ತಿರುವ ನೇಮಕಾತಿ, ಎನ್‌ಕೌಂಟರ್‌ಗಳ ಬಗ್ಗೆ ಸೇನೆಯು ಅಧ್ಯಯನ ನಡೆಸಿ, ವಿಶ್ಲೇಷಿಸಿದೆ. ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಸ್ಥಳೀಯ ಉಗ್ರತ ಮಾಹಿತಿ ಸಂಗ್ರಹಿಸುವ ಸೇನೆಯ ಅಧಿಕಾರಿಗಳು ಅಲ್ಲಿ ‘ಕಾಂಟ್ಯಾಕ್ಟ್ ಟ್ರೇಸಿಂಗ್’ ವಿಧಾನವನ್ನು ಅನುಸರಿಸುತ್ತಿದ್ದಾರೆ.

‘ಇದರ ಫಲಿತಾಂಶ ಸಕಾರಾತ್ಮಕವಾಗಿದ್ದು, ಭಯೋತ್ಪಾದನೆ ಮತ್ತು ಹಿಂಸಾಚಾರದತ್ತ ಆಕರ್ಷಿತರಾಗಿದ್ದ ಅನೇಕ ಯುವಕರು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡಿದ್ದಾರೆ. ಅಂತೆಯೇ ಅನೇಕರು ಉಗ್ರಗಾಮಿಗಳಾಗುವುದನ್ನು ತಡೆಯಲಾಗಿದೆ’ ಎಂದು ಮಾಹಿತಿ ನೀಡಿದ ಲೆ.ಜ. ರಾಜು ಅವರು, ಈ ಸಂಬಂಧ ಅಂಕಿ–ಅಂಶಗಳನ್ನು ನೀಡಲು ನಿರಾಕರಿಸಿದರು.

‘ಅನೇಕ ಪ್ರಕರಣಗಳಲ್ಲಿ ಯುವಕರ ತಾಯಂದಿರು ಮತ್ತು ಕುಟುಂಬ ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪ್ರೀತಿಪಾತ್ರರ ಬಗ್ಗೆ ಹಂಚಿಕೊಂಡಿರುವ ಮನವಿ ನೋಡಿಯೇ ರಕ್ತಪಾತದಿಂದ ಹಿಂದೆ ಸರಿದಿದ್ದಾರೆ. ದಾರಿತಪ್ಪಿರುವ ಯುವಕರಿಗೆ ಮಾರ್ಗದರ್ಶನ ಮಾಡುವಲ್ಲಿ ಸಮಾಜ ಮತ್ತು ಕುಟುಂಬದ ಪಾತ್ರ ಬಹುದೊಡ್ಡದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘2016ರಲ್ಲಿ ವಿಕ್ಟರ್ ಫೋರ್ಸ್‌ನ ಮುಖ್ಯಸ್ಥನಾಗಿದ್ದಾಗ, ಅನಂತ್‌ನಾಗ್ ಜಿಲ್ಲೆಯ ಮಜೀದ್ ಖಾನ್ ಎಂಬ ಇಪ್ಪತ್ತರ ಯುವಕ ಲಷ್ಕರ್ ಎ ತಯ್ಯಬಾ ಉಗ್ರರ ಗುಂಪು ಸೇರಿದ್ದ. ತಾಯಿಯೊಂದಿಗೆ ಆತನಿಗೆ ಸಂಪರ್ಕ ಕಲ್ಪಿಸಿದ ನಂತರ ಮನಪರಿವರ್ತನೆಯಾಗಿ ಆತ ಆ ಸಂಘಟನೆ ಬಿಟ್ಟುಬಂದಿದ್ದ. ಈಗ ಆತ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ’ ಎಂದು ಅವರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT