ಮಂಗಳವಾರ, ಜನವರಿ 25, 2022
24 °C
ಎರಡನೇ ಅಲೆಗೆ ಹೋಲಿಸಿದರೆ ಸೌಮ್ಯ–ಐಐಟಿ ವಿಜ್ಞಾನಿಯ ಗಣಿತಶಾಸ್ತ್ರೀಯ ಅಂದಾಜು

ಫೆಬ್ರುವರಿಯಲ್ಲಿ ಕೊರೊನಾ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ ಮಣೀಂದ್ರ ಅಗರ್‌ವಾಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದು, ದೇಶದಲ್ಲಿ ಫೆಬ್ರುವರಿ ಹೊತ್ತಿಗೆ ಮೂರನೇ ಅಲೆ ಏಳುವ ಸಾಧ್ಯತೆಯಿದೆ ಎಂದು ಐಐಟಿ ವಿಜ್ಞಾನಿ ಮಣೀಂದ್ರ ಅಗರ್‌ವಾಲ್ ಅಂದಾಜಿಸಿದ್ದಾರೆ.
ಗಣಿತಶಾಸ್ತ್ರೀಯ ಮಾದರಿಯ ಆಧಾರದ ಮೇಲೆ ಅವರು ಈ ಅಂದಾಜು ಮಾಡಿದ್ದಾರೆ.

‘ಮೂರನೇ ಅಲೆಗೆ ಓಮೈಕ್ರಾನ್ ಕಾರಣವಾಗಲಿದೆ. ಆದರೆ ಎರಡನೇ ಅಲೆಯ ತೀವ್ರತೆಗೆ ಹೋಲಿಸಿದರೆ, ಮೂರನೇ ಅಲೆ ಸೌಮ್ಯ ಸ್ವರೂಪದಲ್ಲಿ ಇರಲಿದೆ. ಈ ಹಿಂದಿನ ಡೆಲ್ಟಾ ತಳಿಗೆ ಹೋಲಿಸಿದರೆ, ಓಮೈಕ್ರಾನ್‌ ಸೋಂಕಿತರಲ್ಲಿ ತೀವ್ರತೆ ಅಷ್ಟಾಗಿ ಕಂಡುಬಂದಿಲ್ಲ’ ಎಂದು ಅವರು ಹೇಳಿದ್ದಾರೆ. 

ಆದರೂ, ಓಮೈಕ್ರಾನ್‌ನ ಹೆಚ್ಚು ಪ್ರಕರಣಗಳು ವರದಿಯಾಗಿರುವ ದಕ್ಷಿಣ ಆಫ್ರಿಕಾದ ಬೆಳವಣಿಗೆಗಳ ಮೇಲೆ ಕಣ್ಣಿಡಬೇಕು. ಅಲ್ಲಿ ಈವರೆಗೆ ಹೆಚ್ಚಾಗಿ ಆಸ್ಪತ್ರೆ ಸೇರುವ ಪ್ರವೃತ್ತಿ ಕಂಡುಬಂದಿಲ್ಲ ಎಂದಿದ್ದಾರೆ.

ಓಮೈಕ್ರಾನ್‌ನ ಹೊಸ ದತ್ತಾಂಶಗಳು ಮತ್ತು ಆಸ್ಪತ್ರೆ ಸೇರುವವರ ಸಂಖ್ಯೆಯು ವೈರಸ್ ಹರಡುವಿಕೆಯ ಸ್ಪಷ್ಟ ಚಿತ್ರಣವನ್ನು ಕೊಡಲಿದೆ.  ವೈರಸ್‌ನ ಪ್ರಸರಣ ಅತಿಹೆಚ್ಚು ಎಂದು ತೋರಿದ್ದರೂ, ಅದರ ಪರಿಣಾಮ ಅಷ್ಟಾಗಿಲ್ಲ ಎಂದು ಅವರು ಹೇಳಿದ್ದಾರೆ. 

ಡೆಲ್ಟಾಗಿಂತ ಹೆಚ್ಚು ಪ್ರಸರಣ ಸಾಮರ್ಥ್ಯದ, ತೀವ್ರವಾಗಿರುವ ಕೊರೊನಾ ವೈರಸ್‌ನ ಹೊಸ ತಳಿ ಪತ್ತೆಯಾದಲ್ಲಿ, ಅಕ್ಟೋಬರ್‌ನಲ್ಲಿ ಮೂರನೇ ಅಲೆ ಉಂಟಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದರು. ಆದರೆ ನವೆಂಬರ್ ಕೊನೆಯವರೆಗೂ ಹೊಸ ತಳಿ ಕಾಣಿಸಿರಲಿಲ್ಲ. 

ಹೊಸ ರೂಪಾಂತರ ತಳಿಯು ತೀವ್ರ ಸ್ವರೂಪದ್ದಾಗಿರಲಿದೆಯೇ ಅಥವಾ ಮಾನವನ ರೋಗನಿರೋಧಕ ಶಕ್ತಿಯನ್ನು ಭೇದಿಸಲಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದು ಅಗರ್‌ವಾಲ್ ಹೇಳಿದ್ದಾರೆ.

ಸಮೀಕ್ಷೆ: 20ಕ್ಕೂ ಹೆಚ್ಚು ಓಮೈಕ್ರಾನ್ ಪ್ರಕರಣ ಪತ್ತೆಯಾಗಿರುವ ದೇಶಗಳಿಗೆ ವಿಮಾನಯಾನ ನಿರ್ಬಂಧಿಸುವಂತೆ ಶೇ 50ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ ಎಂದು ಲೋಕಲ್‌ ಸರ್ಕಲ್ಸ್‌ ನಡೆಸಿದ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ ಪ್ರತೀ ಇಬ್ಬರಲ್ಲಿ ಒಬ್ಬರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಎಲ್ಲೆಲ್ಲಿ ಓಮೈಕ್ರಾನ್?

- ದಕ್ಷಿಣ ಆಫ್ರಿಕಾ ಹಾಗೂ ಅಮೆರಿಕದಿಂದ ಮುಂಬೈಗೆ ಬಂದಿದ್ದ ಇಬ್ಬರಲ್ಲಿ ಓಮೈಕ್ರಾನ್ ಪತ್ತೆ; ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ

- ಗೋವಾಕ್ಕೆ ಹಡಗಿನಲ್ಲಿ ಬಂದಿಳಿದ ಐವರು ನಾವಿಕರಲ್ಲಿ ಓಮೈಕ್ರಾನ್ ಇರುವ ಶಂಕೆ; ಪ್ರತ್ಯೇಕವಾಸ

- ವಿದೇಶಗಳಿಂದ ದೆಹಲಿಗೆ ಬಂದ ಮೂವರು ಪ್ರಯಾಣಿಕರ ಪೈಕಿ ಇಬ್ಬರಿಗೆ ಕೋವಿಡ್ ದೃಢ, ಮತ್ತೊಬ್ಬರಿಗೆ ಸೋಂಕು ಶಂಕೆ; ಆಸ್ಪತ್ರೆಯಲ್ಲಿ ಪ್ರತ್ಯೇಕವಾಸ

- ತೆಲಂಗಾಣದ ಕರೀಂನಗರ ಜಿಲ್ಲೆಯ ಚಲ್ಮೇಡಾ ಆನಂದರಾವ್ ವೈದ್ಯಕೀಯ ಸಂಸ್ಥೆಯ 43 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆ

- ಕೇಂದ್ರ ಸರ್ಕಾರದ ಜೊತೆ ಸಂವಹನದ ಬಳಿಕವೇ ಮಹಾರಾಷ್ಟ್ರದಲ್ಲಿ ನಿರ್ಬಂಧ ವಿಧಿಸುವ ನಿರ್ಧಾರ–ಆರೋಗ್ಯ ಸಚಿವ ರಾಜೇಶ್‌ ಟೋಪೆ

- ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಇತಿಹಾದ್ ಏರ್‌ಲೈನ್ಸ್‌ಗೆ ನೋಟಿಸ್  

- ರಷ್ಯಾ, ಅರ್ಜೆಂಟಿನಾ, ಕ್ರೊವೇಷಿಯಾ, ನೇಪಾಳದಲ್ಲಿ ಮೊದಲ ಬಾರಿಗೆ ಓಮೈಕ್ರಾನ್‌ ಪ್ರಕರಣ ಪತ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು