ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಲಾಕ್‌ಡೌನ್‌ಗೆ ‘ಜನಸ್ಪಂದನೆ’: ದೆಹಲಿಯಿಂದ ಕಾಲ್ಕೀಳುತ್ತಿದೆ ಕೊರೊನಾ

Last Updated 24 ಮೇ 2021, 7:13 IST
ಅಕ್ಷರ ಗಾತ್ರ

ನವದೆಹಲಿ: ಕಿರಾಣಿ, ತರಕಾರಿ, ಹಾಲು, ಹಣ್ಣು, ಔಷಧ ಅಂಗಡಿ, ಪೆಟ್ರೋಲ್‌ ಬಂಕ್‌ ಹೊರತುಪಡಿಸಿ ಮಿಕ್ಕೆಲ್ಲ ವ್ಯಾಪಾರ– ವಹಿವಾಟು ಸ್ಥಗಿತಗೊಳಿಸಿ ಘೋಷಿಸಲಾದ ಸಂಪೂರ್ಣ ಲಾಕ್‌ಡೌನ್‌ಗೆ ಜನತೆ ಸೂಕ್ತವಾಗಿ ಸ್ಪಂದಿಸಿದ ಪರಿಣಾಮ ದೆಹಲಿಯಲ್ಲಿ ಕೊರೊನಾ ತಹಬದಿಗೆ ಬರುತ್ತಿದೆ.

ಕೊರೊನಾ ಸಾವು– ನೋವಿನಿಂದ ಮೊದಲೇ ಕಂಗೆಟ್ಟಿದ್ದ ಬಹುತೇಕ ಜನ, ದೆಹಲಿ ಸರ್ಕಾರ ಏಪ್ರಿಲ್‌ 19ರಿಂದ (ವಾಸ್ತವದಲ್ಲಿ ಏಪ್ರಿಲ್‌ 16ರ ರಾತ್ರಿಯಿಂದ) ಹೇರಿದ ಲಾಕ್‌ಡೌನ್‌ಗೆ ಮೌನದಿಂದಲೇ ಸಮ್ಮತಿ ಸೂಚಿಸಿದರು.

ದಿಢೀರನೇ ವಾರದ ಸಂತೆಗಳನ್ನು ರದ್ದು ಮಾಡಿದರೂ, ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೂ ಅಗತ್ಯ ವಸ್ತುಗಳು ಲಭ್ಯವಿರುವಂತೆ ನೋಡಿಕೊಂಡಿದ್ದರಿಂದ ಒಬ್ಬರೂ ಖರೀದಿಯ ಧಾವಂತ ತೋರಲಿಲ್ಲ. ಮಾರುಕಟ್ಟೆಗಳಿಗೆ ಮುಗಿ ಬೀಳಲಿಲ್ಲ. ಕುಡಿಯಲು ಸಾರಾಯಿ ಬೇಕೇಬೇಕು ಎಂಬ ಸೊಲ್ಲೆತ್ತಲಿಲ್ಲ. ನಿಶ್ಚಯವಾದ ಸಾವಿರಾರು ಮದುವೆಗಳನ್ನು ಮುಂದೂಡಲಾಯಿತು. ಅಂತೆಯೇ ಯಾರೊಬ್ಬರನ್ನೂ ಪೊಲೀಸರು ರಸ್ತೆಯ ಮೇಲೆ ಅಟ್ಟಾಡಿಸಿ ಬಡಿಯಲು ಅವಕಾಶವೇ ದೊರೆಯಲಿಲ್ಲ.

ಪೊಲೀಸರು ಒಬ್ಬೇ ಒಬ್ಬರನ್ನೂ ತಡೆದು ಉಟ್‌–ಬೈಟ್‌ ಮಾಡಿಸಿದ್ದಾಗಲಿ, ಕಪಾಳ ಮೋಕ್ಷ ಮಾಡಿದ್ದಾಗಲಿ, ಬೈಕ್‌ಗಳ ಬೆನ್ನತ್ತಿ ಲಾಠಿ ಬೀಸಿದ್ದಾಗಲೀ ವರದಿಯಾಗಲಿಲ್ಲ. ಜನರೇ ವ್ಯವಸ್ಥೆಯನ್ನು ಬೆಂಬಲಿಸಿ, ಅನಗತ್ಯವಾಗಿ ರಸ್ತೆಗೆ ಇಳಿಯದ್ದರಿಂದ ನಗರವೆಲ್ಲ ಸಂಪೂರ್ಣ ಸ್ಥಗಿತಗೊಂಡ 5 ವಾರಗಳ ಅವಧಿಯಲ್ಲಿ ಕೊರೊನಾದ ಸೊಲ್ಲಡಗುತ್ತ ಸಾಗಿದೆ.

ಗಂಭೀರ ಪರಿಸ್ಥಿತಿ: ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗ ನಿತ್ಯವೂ ಶೇ 35ರ ಪಾಸಿಟಿವಿಟಿ ಪ್ರಮಾಣದಲ್ಲಿ 29,000ದಷ್ಟು ಜನ ಸೋಂಕಿಗೆ ಒಳಗಾಗುತ್ತಿದ್ದರೆ, ಒಂದು ಲಕ್ಷದಷ್ಟು ಸಕ್ರಿಯ ಪ್ರಕರಣಗಳು ಇದ್ದವು. ಏಪ್ರಿಲ್‌ ಕೊನೆಯ ವಾರದಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಸಿಗದೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಪರದಾಟ ಮುಗಿಲು ಮುಟ್ಟಿತ್ತು.

ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್ ಸೌಲಭ್ಯವಂತೂ ಗಗನ ಕುಸುಮವೇ ಆಗಿತ್ತು. ರೆಮ್‌ಡಿಸಿವಿರ್‌, ಫ್ಯಾಬಿ ಫ್ಲೂ ಇಂಜಕ್ಷನ್‌ಗಳಿಗೂ ತತ್ವಾರ ಎದ್ದಿತ್ತು. ಎಷ್ಟೋ ರೋಗಿಗಳ ಉಸಿರು ಆಸ್ಪತ್ರೆಗಳ ಮಾರ್ಗಮಧ್ಯದಲ್ಲೇ ಸ್ಥಗಿತಗೊಂಡಿತು. ಸ್ಮಶಾನಗಳ ಮುಂದೆ ಸಾಲುಸಾಲು ಸರದಿ.

ನಗರ ಕೇಂದ್ರಿತ ಉದ್ಯೋಗವನ್ನೇ ನಂಬಿ ಬದುಕುವ ಜನ ಕೆಲಸವಿಲ್ಲದೇ ಕಂಗೆಟ್ಟಿದ್ದರೂ ಸತತವಾಗಿ ಮುಂದೂಡಲಾದ ಲಾಕ್‌ಡೌನ್‌ಗೆ ವಿರೋಧ ವ್ಯಕ್ತಪಡಿಸಲಿಲ್ಲ. ಮನೆಯಲ್ಲೇ ಕುಳಿತು ಪ್ರಾಣಕ್ಕೇ ಸಂಚಕಾರ ತರುವ ವೈರಾಣುವಿನ ಹರಡುವಿಕೆಗೆ ಅವಕಾಶ ನಿರಾಕರಿಸಿದರು.

ಲಾಕ್‌ಡೌನ್‌ ಅಡಿ 4 ವಾರ ಗತಿಸಿದ ನಂತರವೇ ಸೋಂಕಿನ ಸರಪಳಿ ಕಡಿತಗೊಳ್ಳುತ್ತ ಸಾಗಿತು. ಮೇ 14ರಿಂದ ಹೊಸದಾಗಿ ಸೋಂಕಿಗೆ ಒಳಗಾಗುವವರ ಸಂಖ್ಯೆ ನಾಲ್ಕಂಕಿಗೆ ಇಳಿಯಿತು.

ಅಲ್ಲಿಂದ ಈಚೆಗೆ ದಿನವೂ ಕಡಿಮೆಯಾಗುತ್ತಲೇ ಸಾಗಿರುವ ಸೋಂಕಿನ ಸಂಖ್ಯೆ ಮೇ 23ರಂದು (ಭಾನುವಾರ) ಬರೀ 1,649ರಷ್ಟು ದಾಖಲಾಗಿದೆ. ಪರೀಕ್ಷೆಗೆ ಒಳಪಟ್ಟಿರುವ 68,043 ಜನರ ಪೈಕಿ ಸೋಂಕು ದೃಢಪಟ್ಟಿರುವುದು ಶೇ 2.42ರಷ್ಟು ಮಾತ್ರ. ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದ್ದು ಈ ಅವಧಿಯಲ್ಲಿ ಮೃತಪಟ್ಟವರು ಕೇವಲ 189 ಜನ.

ನಗರದಲ್ಲಿ 2020ರ ಮಾರ್ಚ್‌ನಿಂದ ಇಲ್ಲಿಯತನಕ ಕೊರೊನಾ 23,202 ಜನರ ಪ್ರಾಣ ಕಿತ್ತುಕೊಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 27,610ಕ್ಕೆ ಕುಸಿದಿದೆ. ಆಸ್ಪತ್ರೆಗಳೆದುರು ಕಂಡು ಬರುತ್ತಿದ್ದ ಸಂಬಂಧಿಗಳ ಆಕ್ರಂದನ ತಗ್ಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮೇ 31ರವರೆಗೆ ಲಾಕ್‌ಡೌನ್‌ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.

ಸಾವು ಬಲು ಕ್ರೂರ. ಪ್ರೀತಿ ಪಾತ್ರರ ಅಗಲಿಕೆ ಸಹಿಸಿಕೊಳ್ಳಲಾಗದ ನೋವನ್ನು ನೀಡುತ್ತದೆ. ಜನರು ಮುಗಿಬಿದ್ದು ಸಾವಿಗೇಕೆ ಮುಕ್ತ ಆಹ್ವಾನ ನೀಡಬೇಕು ಎಂದುಕೊಂಡೇ ಲಾಕ್‌ಡೌನ್‌ ವಿರುದ್ಧ ಚಕಾರ ಎತ್ತದೆ ‘ಸೈ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT