ನವದೆಹಲಿ: ದೆಹಲಿಯ ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಎಎಪಿ ನಡುವಣ ತಿಕ್ಕಾಟ ಭಾನುವಾರ ಇನ್ನಷ್ಟು ತೀವ್ರಗೊಂಡಿದೆ. ತಮ್ಮ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್ ಹೊರಡಿಸಿದೆ ಎಂದು ದೆಹಲಿ ಉಪ
ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ. ಆದರೆ, ಈ ಆರೋಪವನ್ನು ಸಿಬಿಐ ತಳ್ಳಿ ಹಾಕಿದೆ. ಈತನಕ ಲುಕ್‌ಔಟ್ ನೋಟಿಸ್ ಹೊರಡಿಸಿಲ್ಲ ಎಂದಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರು ಸೋಮವಾರ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.
ತಮ್ಮ ಮನೆಯಲ್ಲಿ ಶೋಧ ನಡೆಸಿದ ಸಿಬಿಐ ತಂಡಕ್ಕೆ ಏನೂ ಸಿಕ್ಕಿಲ್ಲ. ಹಾಗಾಗಿ, ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ ಎಂದಿದ್ದಾರೆ ಸಿಸೋಡಿಯಾ.
‘ನಿಮ್ಮ ಎಲ್ಲ ಶೋಧಗಳೂ ವ್ಯರ್ಥವಾಗಿವೆ. ಏನೂ ಸಿಕ್ಕಿಲ್ಲ. ಒಂದು ಪೈಸೆಯ ಅಕ್ರಮವೂ ಆಗಿಲ್ಲ. ಸಿಸೋಡಿಯಾ ನಾಪತ್ತೆಯಾಗಿದ್ದಾರೆ ಎಂದು ಈಗ ನೀವು ಹೇಳುತ್ತಿದ್ದೀರಿ. ಮೋದಿಯವರೇ, ಏನಿದು ಪ್ರಹಸನ? ನಾನು ದೆಹಲಿಯಲ್ಲಿಯೇ ಇದ್ದೇನೆ. ಎಲ್ಲಿ ಬರಬೇಕು ಹೇಳಿ, ಅಲ್ಲಿಗೆ ಬರುತ್ತೇನೆ’ ಎಂದು ಸಿಸೋಡಿಯಾ ಹೇಳಿದ್ದಾರೆ.
ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ ಪ‍್ರಕರಣದ ಇಬ್ಬರು ಆರೋಪಿಗಳು ದೇಶ ಬಿಟ್ಟು ಹೋಗಿದ್ದಾರೆ. ಹಾಗಾಗಿ, ಉಳಿದ ಆರೋಪಿಗಳು ತಪ್ಪಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊಡಿಸಲಾಗಿದೆ ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.
ಕೇಜ್ರಿವಾಲ್ ಬಗ್ಗೆ ಯಾವ ಭಯವೂ ಇಲ್ಲ. ಅವರ ಭ್ರಷ್ಟಾಚಾರದ ಒಂದೊಂದೇ ಮಾಹಿತಿ ಹೊರಕ್ಕೆ ಬರುತ್ತಿದೆ ಎಂದು ಬಿಜೆಪಿಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.
‘ಜನರು ಹಣದುಬ್ಬರದಿಂ
ದಾಗಿ ಸಂಕಷ್ಟದಲ್ಲಿದ್ದಾರೆ. ಯುವಜನರಿಗೆ ಉದ್ಯೋಗ ಇಲ್ಲ. ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳ ಜತೆ ಸೇರಿ ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಹೋರಾಡಬೇಕಾಗಿದೆ. ಆದರೆ, ಕೇಂದ್ರವು ಇಡೀ ದೇಶದ ವಿರುದ್ಧವೇ ಹೋರಾಡುತ್ತಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೆತೆ ಅವರು ಎಎಪಿಯನ್ನು ಟೀಕಿಸುವ ಮೂಲಕ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ಸಾರಿದ್ದಾರೆ. ಶಿಕ್ಷಣವನ್ನು ಮುಂದಿಟ್ಟುಕೊಂಡು ಅಬಕಾರಿ ಹಗರಣ
ವನ್ನು ಮುಚ್ಚಿಹಾಕಲುಎಎಪಿ ಯತ್ನಿಸು
ತ್ತಿದೆ ಎಂದು ಅವರು ಹೇಳಿದ್ದಾರೆ.
ಎಎಪಿ ಮತ್ತು ಕೇಜ್ರಿವಾಲ್ ಅವರಿಗೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರ ಬೆಂಬಲ ದೊರೆತಿದೆ. ಗುಜರಾತ್ ಮತ್ತು ಇತರೆಡೆ ಎಎಪಿಯ ಬೆಳವಣಿಗೆಯನ್ನು ತಡೆಯುವುದಕ್ಕಾಗಿಯೇ ಈ ಎಲ್ಲವೂ ನಡೆಯುತ್ತಿದೆ ಎಂದು ಸಿಬಲ್ ಹೇಳಿದ್ದಾರೆ.
ಕೆಸಿಆರ್‌ರನ್ನು ಎಳೆತಂದ ಬಿಜೆಪಿ
ದೆಹಲಿಯ ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ ಹಗರಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರನ್ನೂ ಬಿಜೆಪಿ ಎಳೆದು ತಂದಿದೆ. ಈ ನೀತಿ ರೂಪಿಸುವುದಕ್ಕಾಗಿ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಕೆಸಿಆರ್ ಅವರ ಕುಟುಂಬದ ಸದಸ್ಯರೂ ಇದ್ದರು ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ದೆಹಲಿಯಲ್ಲಿ ಇರುವಂತಹುದೇ ನೀತಿ ಜಾರಿಯಲ್ಲಿದೆ. ಪಂಜಾಬ್‌ನಲ್ಲಿಯೂ ಇಂತಹುದೇ ನೀತಿಯನ್ನು ಕೆಸಿಆರ್ ಅವರ ಕುಟುಂಬದ ಸದಸ್ಯರು ಜಾರಿ ಮಾಡಿಸಿದ್ದಾರೆ. ಕೆಸಿಆರ್ ಕುಟುಂಬದ ಸದಸ್ಯರು ಸಿಸೋಡಿಯಾ ಮತ್ತು ಕೇಜ್ರಿವಾಲ್ ಜತೆ ಸೇರಿ ಈ ನೀತಿ ರೂಪಿಸಿದ್ದಾರೆ ಎಂದು ಪರ್ವೇಶ್ ಆರೋಪಿಸಿದ್ದಾರೆ.
ಎಂಟು ಮಂದಿಯ ವಿರುದ್ಧ ಲುಕ್‌ಔಟ್ ನೋಟಿಸ್
ಅಬಕಾರಿ ನೀತಿ ಜಾರಿ ಹಗರಣದ ಎಫ್‌ಐಆರ್
ನಲ್ಲಿ ಹೆಸರು ಇರುವ ಎಂಟು ಮಂದಿಯ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರು ಇರುವ ಸಾರ್ವಜನಿಕ ಸೇವಕರ ವಿರುದ್ಧ ಇಂತಹ ನೋಟಿಸ್ ಹೊರಡಿಸಿಲ್ಲ. ಸಿಸೋಡಿಯಾ ಸೇರಿ ಸಾರ್ವಜನಿಕ ಸೇವಕರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸುವ ಅಗತ್ಯ ಕಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಒಟ್ಟು 13 ಜನರನ್ನು ಹೆಸರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.