ಬುಧವಾರ, ಸೆಪ್ಟೆಂಬರ್ 29, 2021
20 °C

ಉನ್ನಾವೊ ಸಂತ್ರಸ್ತೆಯ ಅಪಘಾತ ಪ್ರಕರಣ: ಸಿಬಿಐ ತನಿಖೆ ಎತ್ತಿಹಿಡಿದ ನ್ಯಾಯಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಅಪಘಾತ (2019) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ತನಿಖೆಯನ್ನು ಎತ್ತಿಹಿಡಿದಿರುವ ದೆಹಲಿ ನ್ಯಾಯಾಲಯ, ಈ ಪ್ರಕರಣದಲ್ಲಿ ಸಿಬಿಐ ಲೋಪ ಎಸಗಿದೆ ಎಂಬುದನ್ನು ತಳ್ಳಿಹಾಕಿದೆ.

ಉನ್ನಾವೊ ಅತ್ಯಾಚಾರದ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸದಸ್ಯರು ವಕೀಲರೊಂದಿಗೆ ಕಾರಿನಲ್ಲಿ ಸಾಗುತ್ತಿದ್ದಾಗ ರಾಯ್‌ ಬರೇಲಿ ಬಳಿ ಅತಿ ವೇಗವಾಗಿ ಬಂದ ಟ್ರಕ್‌ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಮೃತಪಟ್ಟಿದ್ದರು. ಸಂತ್ರಸ್ತೆ ಮತ್ತು ವಕೀಲರು ತೀವ್ರ ಗಾಯಗೊಂಡಿದ್ದರು.

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್‌ ಸೆಂಗರ್ ಮತ್ತು ಇತರ ಒಂಬತ್ತು ಜನರ ವಿರುದ್ಧ ಸಂತ್ರಸ್ತೆಯ ಕುಟುಂಬದವರು ‘ಅಪಘಾತದ ಪಿತೂರಿ’ ಪ್ರಕರಣ ದಾಖಲಿಸಿದ್ದರಿಂದ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು, ದೂರುದಾರರ ಆಕ್ಷೇಪಣೆಗಳು ರೋಮಾಂಚಕ ಕತೆಯಂತಿವೆ. ಆದರೆ ಅವು ಕೇವಲ ಊಹೆಗಳನ್ನು ಆಧರಿಸಿವೆ ಎಂದು ಆರೋಪಗಳನ್ನು ತಳ್ಳಿಹಾಕಿದರು.

ಸಿಬಿಐ ನಡೆಸಿದ ತನಿಖೆಯ ನಿಷ್ಠೆ, ನಿಖರತೆ ಮತ್ತು ಪ್ರಾಮಾಣಿಕತೆಯನ್ನು ಅನುಮಾನಿಸಲು ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಈ ಪ್ರಕರಣದಲ್ಲಿ ಕುಲದೀಪ್‌ ಸೆಂಗರ್‌, ಟ್ರಕ್‌ ಚಾಲಕ ಅಥವಾ ಕ್ಲೀನರ್‌ ಅಥವಾ ಟ್ರಕ್‌ ಮಾಲೀಕರ ನಡುವೆ ಕ್ರಿಮಿನಲ್‌ ಪಿತೂರಿ ನಡೆದಿರುವ ಕುರಿತು ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಿದೆ.

ಟ್ರಕ್‌ ಚಾಲಕನ ನಿರ್ಲಕ್ಷ್ಯದಿಂದ ಅಫಘಾತ ಸಂಭವಿಸಿದ್ದು, ಜೀವ ಹಾನಿಯಾಗಿದೆ ಎಂದ ನ್ಯಾಯಾಧೀಶರು ಜುಲೈ 31ರ ಆದೇಶದಲ್ಲಿ ತಿಳಿಸಿದ್ದಾರೆ.

ಇದಲ್ಲದೆ, 2017ರಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗರ್‌ ಜೀವಾವಧಿ ಶಿಕ್ಷೆಗೆ (2019ರ ಡಿಸೆಂಬರ್‌ 20) ಒಳಗಾಗಿದ್ದಾರೆ. ನ್ಯಾಯಾಂಗ ವಶದಲ್ಲಿದ್ದ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲಿ ಸೆಂಗರ್‌, ಆತನ ಸಹೋದರ ಮತ್ತು ಐವರು ಸಹಚರರಿಗೆ ನ್ಯಾಯಾಲಯ 2020ರ ಮಾರ್ಚ್‌ 4ರಂದು 10 ವರ್ಷಗಳ ಸಜೆ ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು