ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಹೆಚ್ಚುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್‌ ಕಳವಳ

ಅನುಭವದಿಂದ ಪಾಠ ಕಲಿಯದಿದ್ದರೆ ಅಪಾಯ ತಪ್ಪಿದ್ದಲ್ಲ: ಮುಖ್ಯನ್ಯಾಯಮೂರ್ತಿ ದತ್ತಾ ಎಚ್ಚರಿಕೆ
Last Updated 31 ಆಗಸ್ಟ್ 2021, 8:26 IST
ಅಕ್ಷರ ಗಾತ್ರ

ಮುಂಬೈ: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಹೆಚ್ಚುತ್ತಿರುವ ಬಗ್ಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

‘ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ನಿಯಂತ್ರಿಸದಿದ್ದರೆ ಇಲ್ಲವೇ ನಿರ್ಬಂಧ ಹೇರದಿದ್ದರೆ, ಕೋವಿಡ್‌–19ನ ಎರಡನೇ ಅಲೆ ವೇಳೆ ವರ್ಷದ ಆರಂಭದಲ್ಲಿ ಕಂಡುಬಂದಂಥ ಪರಿಸ್ಥಿತಿಯನ್ನೇ ನಗರ ಎದುರಿಸಬೇಕಾಗುತ್ತದೆ’ ಎಂದೂ ಹೈಕೋರ್ಟ್‌ ಎಚ್ಚರಿಸಿದೆ.

ಮುಖ್ಯನ್ಯಾಯಮೂರ್ತಿ ದೀಪಂಕರ್‌ ದತ್ತಾ, ನ್ಯಾಯಮೂರ್ತಿಗಳಾದ ಎ.ಎ.ಸೈಯದ್‌, ಕೆ.ಕೆ.ತಾತೇಡ್‌ ಹಾಗೂ ಪಿ.ಬಿ.ವರಾಳೆ ಅವರಿರುವ ನ್ಯಾಯಪೀಠ ಈ ಎಚ್ಚರಿಕೆ ನೀಡಿತು.

‘ಕೋವಿಡ್‌–19ನ ಮೂರನೇ ಅಲೆ ಕಾಣಿಸಿಕೊಳ್ಳುವ ಎಲ್ಲ ಸೂಚನೆಗಳೂ ಇವೆ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಕ್ಕೆ ಅಪಾಯ ತಪ್ಪಿದ್ದಲ್ಲಎಂಬ ತಜ್ಞರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಮುಖ್ಯನ್ಯಾಯಮೂರ್ತಿ ದತ್ತಾ ಹೇಳಿದರು.

‘ಹೈಕೋರ್ಟ್‌ನ ಆಡಳಿತಾತ್ಮಕ ಸಮಿತಿ, ವಕೀಲರು, ತಜ್ಞವೈದ್ಯರ ಸಭೆ ಸೋಮವಾರ ನಡೆಯಿತು. ಮುಂದಿನ ವರ್ಷ ಏಪ್ರಿಲ್‌ವರೆಗೆ ದೇಶಕ್ಕೆ ಕೋವಿಡ್‌–19ನ ಬಾಧೆಯಿಂದ ಮುಕ್ತಿ ಇಲ್ಲ ಎಂದು ಸುಪ್ರೀಂಕೋರ್ಟ್‌ ರಚಿಸಿರುವ ವಿಶೇಷ ಕಾರ್ಯಪಡೆ ಮುಖ್ಯಸ್ಥ ಡಾ.ರಾಹುಲ್‌ ಪಂಡಿತ್‌ ಈ ಸಭೆಯಲ್ಲಿ ಎಚ್ಚರಿಕೆ ನೀಡಿದರು’ ಎಂದೂ ನ್ಯಾಯಮೂರ್ತಿ ದತ್ತಾ ಹೇಳಿದರು.

‘ಸಾರ್ವಜನಿಕ ಸ್ಥಳಗಳು, ಜುಹು ಚೌಪಾಟಿ, ಗಿರ್‌ಗಾಂವ್ ಚೌಪಾಟಿ ಹಾಗೂ ಮರೀನ್‌ ಡ್ರೈವ್‌ ಬೀಚ್‌ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿರುವುದನ್ನು ತೋರಿಸುವ ಚಿತ್ರಗಳು ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಸಂಬಂಧ ಸರ್ಕಾರ ಕಠಿಣ ನಿರ್ಬಂಧಗಳನ್ನು ಹೇರದೇ ಇದ್ದರೆ ಅಪಾಯ ತಪ್ಪಿದ್ದಲ್ಲ. ನಾವು ಅನುಭವದಿಂದ ಪಾಠ ಕಲಿಯಬೇಕು’ ಎಂದೂ ಹೇಳಿದರು.

‘3ನೇ ಅಲೆಯ ಅಪಾಯ ಹಾಗೂ ಹಬ್ಬಗಳು ಸಮೀಪಿಸುತ್ತಿರುವ ಕಾರಣ ಜನರ ಜೀವ ಕಾಪಾಡುವುದು ಮುಖ್ಯ. ಹೀಗಾಗಿ ಕೋವಿಡ್‌–19 ನಿರ್ಬಂಧಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌, ಮಹಾರಾಷ್ಟ್ರ ಮತ್ತು ಗೋವಾದಲ್ಲಿರುವ ನ್ಯಾಯಮಂಡಳಿಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಸೆಪ್ಟೆಂಬರ್‌ 30ರ ವರೆಗೆ ವಿಸ್ತರಿಸಲಾಗಿದೆ’ ಎಂದು ನ್ಯಾಯಪೀಠ ಹೇಳಿತು.

ಕೋವಿಡ್‌ ಪರಿಸ್ಥಿತಿಯನ್ನು ಪರಿಶೀಲಿಸಲು ಸೆಪ್ಟೆಂಬರ್‌ 24ರಂದು ವಿಚಾರಣೆ ನಡೆಸುವುದಾಗಿಯೂ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT