ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19| ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲೂ ಗೊಂದಲ

24 ಗಂಟೆಗಳ ಅವಧಿಯಲ್ಲಿಯೇ ವಿಭಿನ್ನ ಫಲಿತಾಂಶ ನೀಡುವ ಪ್ರಯೋಗಾಲಯಗಳು
Last Updated 2 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಗೆ ಸೋಂಕು ತಗುಲಿಲ್ಲ ಎಂದಾದಲ್ಲಿ ಆ ಬಗ್ಗೆ ದೂರವಾಣಿ ಸಂಖ್ಯೆಗೆ ಸಂದೇಶ ರವಾನಿಸುವ ವ್ಯವಸ್ಥೆ ಇನ್ನೂ ರೂಪುಗೊಂಡಿಲ್ಲ. ಇನ್ನೊಂದೆಡೆ, ಆರ್‌ಟಿ–ಪಿಸಿಆರ್‌ ಪರೀಕ್ಷೆಗಳಲ್ಲಿ ಕೂಡ ವಿಭಿನ್ನ ಫಲಿತಾಂಶಗಳು ಬರುತ್ತಿರುವುದು ನಗರದ ಜನತೆಯನ್ನು ಗೊಂದಲಕ್ಕೆ ಈಡುಮಾಡಿದೆ.

ನಗರದಲ್ಲಿ ಕೋವಿಡ್ ‍ಪ್ರಕರಣಗಳು ಕಾಣಿಸಿಕೊಂಡು 8 ತಿಂಗಳು ಕಳೆದರೂ ಪರೀಕ್ಷಾ ಗೊಂದಲಗಳು ನಿವಾರಣೆಯಾಗಿಲ್ಲ. ಪ್ರಾರಂಭಿಕ ದಿನಗಳಲ್ಲಿ ದಿನವೊಂದಕ್ಕೆ 200ರಿಂದ 300 ಮಂದಿಗೆ ನಡೆಸಲಾಗುತ್ತಿದ್ದ
ಕೋವಿಡ್ ಪರೀಕ್ಷೆಗಳ ಸಂಖ್ಯೆ 50 ಸಾವಿರಕ್ಕೆ ಏರಿಕೆಯಾಗಿದೆ. ಸೋಂಕಿತರನ್ನು ಬೇಗ ಪತ್ತೆ ಮಾಡುವುದು ಹಾಗೂ ಕೋವಿಡ್ ಸಾವಿನ ಪ್ರಮಾಣ ಇಳಿಕೆ ಮಾಡುವ ಉದ್ದೇಶದಿಂದ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ಕೂಡ ನಗರದ ವಿವಿಧೆಡೆ ಮಾಡಲಾಗುತ್ತಿದೆ.

ಆ್ಯಂಟಿಜೆನ್ ಪರೀಕ್ಷೆಯಲ್ಲಿ ನಿಖರವಾದ ಫಲಿತಾಂಶ ದೊರೆಯಲಾರದು ಎಂಬ ಕಾರಣಕ್ಕೆ ಸೋಂಕು ಲಕ್ಷಣಗಳು ಇರುವವರಿಗೆ ನೆಗೆಟಿವ್ ಫಲಿತಾಂಶ ಬಂದಲ್ಲಿ ಎರಡನೇ ಬಾರಿ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈಗ ನಗರದ ಕೆಲವೆಡೆ ಮೊದಲ ಬಾರಿ ನಡೆಸಲಾದ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶದ
ವರದಿ ಪಡೆದವರು, ಎರಡನೇ ಬಾರಿ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್ ವರದಿ ಬಂದ ಪ್ರಕರಣಗಳು ಪತ್ತೆಯಾಗಿವೆ.

ಸೋಂಕಿತರಾದವರು ನಿರಾಳ: ನಗರದ ಗ್ರ್ಯಾಫೈಟ್ ಇಂಡಿಯಾ ರಸ್ತೆಯಲ್ಲಿರುವ ಅರಾಟ್ ಪ್ರೀಮಿಯರ್ ಅಪಾರ್ಟ್‌ಮೆಂಟ್‌ ಸಮುಚ್ಛಯದ ನಿವಾಸಿಗಳಿಗೆ ಆರ್‌ಟಿ–ಪಿಸಿಆರ್ ಕೋವಿಡ್ ಪರೀಕ್ಷೆ ನಡೆಸುವ ಸಂಬಂಧ ಬಿಬಿಎಂಪಿ ಸಿಬ್ಬಂದಿ ಅ.23ರಂದು ಮಾದರಿಗಳನ್ನು ಸಂಗ್ರಹಿಸಿದ್ದರು. ಅ.24ರಂದು ಪರೀಕ್ಷಾ ವರದಿಯಲ್ಲಿ ಒಟ್ಟು 7 ಮಂದಿ ಕೋವಿಡ್ ಪೀಡಿತರಾಗಿದ್ದಾರೆ ಎಂಬ ಫಲಿತಾಂಶ ಬಂದಿತ್ತು. ಇದರಿಂದ ಗೊಂದಲಕ್ಕೆ ಒಳಗಾದ ಅವರು ಎರಡನೇ ಬಾರಿ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆ ವೇಳೆ ಸೋಂಕು ತಗುಲಿಲ್ಲ ಎಂಬ ವರದಿ ಬಂದಿದೆ. ಪ್ರಯೋಗಾಲಯಗಳು ನೀಡಿರುವ ವಿಭಿನ್ನ ಪರೀಕ್ಷಾ ವರದಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

‘ಅ.24ರಂದು ನಮ್ಮ ಕುಟಂಬದ ಮೂರು ಮಂದಿ ಸೇರಿದಂತೆ ಅಪಾರ್ಟ್‌ಮೆಂಟ್ ಸಮುಚ್ಛಯದಲ್ಲಿ ಒಟ್ಟು 7 ಮಂದಿ ಕೋವಿಡ್ ಪೀಡಿತರಾಗಿರುವ ಬಗ್ಗೆ ವರದಿಗಳು ಬಂದವು. ಇದರಿಂದ ಮಾನಸಿಕವಾಗಿ ಕುಗ್ಗಿದ ನಾನು, ಮನೆಯಲ್ಲಿಯೇ ಪ್ರತ್ಯೇಕ ವಾಸಕ್ಕೆ ಒಳಗಾದೆ. ಅ.25ರಂದು ಖಾಸಗಿ ಪ್ರಯೋಗಾಲಯದಲ್ಲಿ ಮತ್ತೊಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡೆ. ಅಲ್ಲಿ ಸೋಂಕಿತನಾಗಿಲ್ಲ ಎನ್ನುವುದು ದೃಢಪಟ್ಟಿತ್ತು’ ಎಂದು ಬಿಜು ಟಿ. ಅಯ್ಯಪ್ಪನ್ ತಿಳಿಸಿದರು.

‘ನನ್ನ ಹಾಗೇ ಉಳಿದವರು ಕೂಡ ಎರಡನೇ ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡರು. ಎಲ್ಲರಿಗೂ ನೆಗೆಟಿವ್ ಎಂಬ ವರದಿ ಬಂದಿದೆ. ಈ ನಡುವೆ ದೂರವಾಣಿ ಮೂಲಕ ಸಮಾಲೋಚನೆ ನಡೆಸುವ ಖಾಸಗಿ ಆಸ್ಪತ್ರೆಗಳು, ಕೊಠಡಿಗಳನ್ನು ಸೋಂಕು ನಿವಾರಕದಿಂದ ಸ್ವಚ್ಛಪಡಿಸುವ ಏಜೆನ್ಸಿಗಳು ಸೇರಿದಂತೆ ವಿವಿಧ ಸಂಸ್ಥೆಗಳು ನಮ್ಮನ್ನು ಸಂಪರ್ಕಿಸಿದವು. ಬಿಬಿಎಂಪಿ ಸಿಬ್ಬಂದಿಯಿಂದಲೇ ಸಂಖ್ಯೆಯನ್ನು ಪಡೆದಿರಬೇಕು’ ಎಂದು ಸಂದೇಹ ವ್ಯಕ್ತಪಡಿಸಿದರು.

ಕೋವಿಡ್‌ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಲ್ಲಿ ದೂರವಾಣಿ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತಿದೆ. ಆದರೆ, ನೆಗೆಟಿವ್ ವರದಿ ಬಂದಲ್ಲಿ ಈ ಬಗ್ಗೆ ಸಂದೇಶ ರವಾನಿಸುವ ವ್ಯವಸ್ಥೆ ರೂಪುಗೊಂಡಿಲ್ಲ. ಇದರಿಂದ ಕೋವಿಡ್ ಪರೀಕ್ಷೆಗೆ ಒಳಪಟ್ಟವರು ಗೊಂದಲಕ್ಕೆ ಒಳಪಡುತ್ತಿದ್ದಾರೆ. ಸೋಂಕಿತರಾಗಿಲ್ಲ ಎಂದಾದಲ್ಲಿ ಕೂಡ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕೋವಿಡ್ ಕಾರ್ಯಪಡೆಯ ತಜ್ಞರು ಸರ್ಕಾರಕ್ಕೆ ಏಳು ತಿಂಗಳ ಹಿಂದೆಯೇ ಸೂಚಿಸಿದ್ದರು.

‘ಯಾವುದೇ ಒಂದು ಕಾಯಿಲೆಯನ್ನು ಒಂದೇ ಪರೀಕ್ಷೆಯಿಂದ ನಿವಾರಣೆ ಮಾಡಲು ಸಾಧ್ಯವಿಲ್ಲ. ವಿಭಿನ್ನ ಪರೀಕ್ಷೆಗಳ ಅಗತ್ಯ ಇರಲಿದೆ. ಆರ್‌ಟಿ–ಪಿಸಿಆರ್ ಪರೀಕ್ಷೆ ಕೂಡ ಶೇ 100 ರಷ್ಟು ನಿಖರ ಫಲಿತಾಂಶ ನೀಡಲಿದೆ ಎಂದು ಹೇಳಲು ಸಾಧ್ಯವಿಲ್ಲ. ಕೋವಿಡ್‌ ನೆಗೆಟಿವ್ ವರದಿ ಬಂದಲ್ಲಿ ಕೂಡ ವ್ಯಕ್ತಿಗೆ ಸಂದೇಶ ರವಾನಿಸುವ ವ್ಯವಸ್ಥೆ ರೂಪಿಸಬೇಕು ಎಂದು ಕೋವಿಡ್ ವಾರ್‌ರೂಮ್‌ಗೆ ಸೂಚಿಸಿದ್ದೇವೆ. ವರದಿ ಬಂದಿಲ್ಲ ಎಂಬ ಕಾರಣದಿಂದ ಕೆಲವರು ಇನ್ನಷ್ಟು ಆತಂಕಕ್ಕೆ ಒಳಪಡುವ ಸಾಧ್ಯತೆ ಇರುತ್ತದೆ’ ಎಂದು ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು

***

ಆರ್‌ಟಿ–ಪಿಸಿಆರ್ ಪರೀಕ್ಷೆಗಳಲ್ಲಿ ವಿರುದ್ಧವಾದ ಫಲಿತಾಂಶಗಳು ಬರುವುದು ಅಪರೂಪ. ಕೆಲ ದಿನಗಳ ಬಳಿಕ ಪರೀಕ್ಷಿಸಿಕೊಂಡಲ್ಲಿ ವೈರಲ್ ಲೋಡ್ ಕಡಿಮೆಯಾಗಿ, ನೆಗೆಟಿವ್ ವರದಿ ಬರುವ ಸಾಧ್ಯತೆಯಿದೆ
- ಡಾ.ಸಿ.ಎನ್. ಮಂಜುನಾಥ್, ಕೋವಿಡ್ ಪರೀಕ್ಷೆಗಳ ನೋಡಲ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT