ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವ್ಯಾಪ್ತಿ ಒಳನಾಡಿಗೂ ವಿಸ್ತರಣೆ

Last Updated 1 ನವೆಂಬರ್ 2020, 18:04 IST
ಅಕ್ಷರ ಗಾತ್ರ

ನವದೆಹಲಿ: ಅರ್ಧದಷ್ಟುಕೊರೊನಾ ಪ್ರಕರಣಗಳು ಹಾಗೂ ಶೇ 60ರಷ್ಟು ಮರಣ ಪ್ರಮಾಣ ದೇಶದ 50 ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದ್ದರೂ, ಸೋಂಕು ಸದ್ದಿಲ್ಲದಂತೆ ಒಳನಾಡಿನತ್ತ ದಾಪುಗಾಲಿಡುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.

ಈ 50 ಜಿಲ್ಲೆಗಳಲ್ಲಿ ರಾಜ್ಯದ ಬೆಂಗಳೂರು ನಗರ ಹಾಗೂ ಬಳ್ಳಾರಿ ಜಿಲ್ಲೆಗಳು ಸೇರಿವೆ.

ಸೆಪ್ಟೆಂಬರ್ 27ರಂದು ಭಾರತದ ಒಟ್ಟು ಕೋವಿಡ್ ಸಂಖ್ಯೆ 60 ಲಕ್ಷ ದಾಟಿದಾಗ,ಶೇ 63.7ರಷ್ಟು ಪ್ರಕರಣಗಳು ಹಾಗೂ ಶೇ 57.7ರಷ್ಟು ಸಾವು 50 ಜಿಲ್ಲೆಗಳಲ್ಲಿ ದಾಖಲಾಗಿದ್ದವು. ಅಕ್ಟೋಬರ್ 10ರ ವೇಳೆಗೆ ಒಟ್ಟು ಪ್ರಕರಣಗಳು 70 ಲಕ್ಷದ ಗಡಿ ದಾಟಿದಾಗ, ಅದೇ 50 ಜಿಲ್ಲೆಗಳಲ್ಲಿ ಪ್ರಕರಣಗಳ ಪ್ರಮಾಣ ಶೇ 61.5 ಹಾಗೂ ಸಾವಿನ ಪ್ರಮಾಣ ಶೇ 51ಕ್ಕೆ ಇಳಿಕೆಯಾಗಿತ್ತು. ಈ 50 ಜಿಲ್ಲೆಗಳ ಹೊರಗಡೆ ಸೋಂಕು ಹರಡುತ್ತಿದೆ ಎಂಬುದು ಇದರ ಅರ್ಥ ಎಂದು ವರದಿಯಲ್ಲಿ ಹೇಳಲಾಗಿದೆ.

‘ಸೋಂಕಿತರು ಹಾಗೂ ಸಾವಿಗೀಡಾದವರ ಸಂಖ್ಯೆ ಈ ಜಿಲ್ಲೆಗಳಲ್ಲಿ ಕಡಿಮೆಯಾಗಿದೆ. ಆದರೆ ವೈರಸ್ ಹರಡುವಿಕೆಯ ವ್ಯಾಪ್ತಿ ವಿಸ್ತರಣೆಯಾಗಿದೆ. ವೈರಸ್ ಹರಡುವಿಕೆ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಕೋವಿಡ್ ತಪಾಸಣೆ ಪ್ರಮಾಣವನ್ನು ಹೆಚ್ಚಿಸುವ ಕಾರ್ಯತಂತ್ರ ರೂಪಿಸಬೇಕಿದೆ’ ಎಂದು ಐಐಎಂ ಕೋಯಿಕ್ಕೋಡ್ ಪ್ರಾಧ್ಯಾಪಕ, ಆರೋಗ್ಯ ಅರ್ಥಶಾಸ್ತ್ರಜ್ಞ ರಿಜೊ ಎಂ. ಜಾನ್ ಹೇಳಿದ್ದಾರೆ. ಇವರು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರೂ ಹೌದು.

ಪ್ರಕರಣ ಹೆಚ್ಚಳಕ್ಕೆ ಸಾಕ್ಷಿಯಾಗಿರುವ ಜಿಲ್ಲೆಗಳಲ್ಲಿ ಸೋಂಕಿನ ಪ್ರಸರಣ ಸರಪಳಿಯನ್ನು ತುಂಡರಿಸಲು ಉತ್ತಮ ಸಾರ್ವಜನಿಕ ಆರೋಗ್ಯ ಅಭ್ಯಾಸಗಳ ಅನುಷ್ಠಾನದ ಅಗತ್ಯವಿದೆ. ಪ್ರಕರಣಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವಾಗ, ಪ್ರಸರಣ ಅಧಿಕವಾಗುವ ಹಾಗೂ ಪ್ರತಿಯೊಬ್ಬರಿಗೂ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಈ ಅಪಾಯವನ್ನು ತಡೆಗಟ್ಟುವ ಗುರಿ ಇಟ್ಟುಕೊಳ್ಳಬೇಕು ಎಂದು ದೆಹಲಿಯ ಜಾರ್ಜ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ಸಂಶೋಧಕ ಉಮ್ಮನ್ ಜಾನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ದೃಢಪಟ್ಟ ತಕ್ಷಣ ಅವರ ಸಂಪರ್ಕಿತರನ್ನು ಪತ್ತೆಮಾಡಿ, ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಪ್ರತ್ಯೇಕವಾಗಿ ಇರಿಸುವುದರಿಂದ ಸೋಂಕಿನ ಸರಪಳಿ ತುಂಡರಿಸಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT