ಗುರುವಾರ , ಡಿಸೆಂಬರ್ 3, 2020
23 °C

Covid-19 India Update:‘ದೀಪಾವಳಿ, ಚುನಾವಣೆಯಿಂದ ಪ್ರಕರಣಗಳು ಹೆಚ್ಚುವ ಸಾಧ್ಯತೆ’

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಹಬ್ಬಗಳು ಮತ್ತು ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆಯಿಂದಾಗಿ ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ.

‘ಇತ್ತೀಚೆಗೆ ನಡೆದ ಚುನಾವಣೆಗಳು, ದುರ್ಗಾ ಪೂಜೆ, ದೀಪಾವಳಿ ಹಾಗೂ ಇತರ ಹಬ್ಬಗಳ ಪರಿಣಾಮವಾಗಿ ಕೋವಿಡ್–19 ಪ್ರಕರಣಗಳು ಹೆಚ್ಚಾಗಬಹುದು. ಈ ವಾರ ಮತ್ತು ಮುಂದಿನ ವಾರ ಕೋವಿಡ್ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ’ ಎಂದು ಹೇಳಿದ್ದಾರೆ.

ಸದ್ಯ ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಇಳಿಮುಖವಾಗುತ್ತಾ ಸಾಗಿವೆ. ದೇಶದಲ್ಲಿ ಕಳೆದೆರಡು 2 ದಿನಗಳಲ್ಲಿ 30 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿದೆ. ಅದೇರೀತಿ ಹಿಂದಿನ ನಾಲ್ಕು ವಾರಗಳಲ್ಲಿ ಪ್ರತಿದಿನ ಸರಾಸರಿ 48 ಸಾವಿರ ಪ್ರಕರಣಗಳು ವರದಿಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಂದು ಬೆಳಗ್ಗೆ 8 ಗಂಟೆ ವರೆಗೆ ದೇಶದಲ್ಲಿ ಒಟ್ಟು 4,53,401 ಪ್ರಕರಣಗಳು ಸಕ್ರಿಯವಾಗಿವೆ. ಸಾವಿನ ಸಂಖ್ಯೆ 1,30,519ಕ್ಕೆ ತಲುಪಿದ್ದು, 82,90,370 ಸೋಂಕಿತರು ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ 1,565 ಹೊಸ ಪ್ರಕರಣ
ಕರ್ನಾಟದಲ್ಲಿ ಇಂದು ಹೊಸದಾಗಿ 1,336 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕು ಪ್ರಕಣಗಳ ಸಂಖ್ಯೆ  8,64,140ಕ್ಕೆ ಏರಿದೆ. ಈ ಪೈಕಿ 11,557 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 25,323 ಸಕ್ರಿಯ ಪ್ರಕರಣಗಳಿವೆ.

ದೆಹಲಿ: ನವೆಂಬರ್‌ ಒಂದರಿಂದ ಈಚೆಗೆ ಒಂದು ಲಕ್ಷ ಪ್ರಕರಣ
ನವೆಂಬರ್‌ 1ರಿಂದ 16ರ ವರೆಗೆ ದೆಹಲಿಯಲ್ಲಿ ಹೊಸದಾಗಿ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 1200 ಜನರು ಮೃತಪಟ್ಟಿದ್ದು, 94 ಸಾವಿರಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ಇಂದು ಪಂಜಾಬ್‌ನಲ್ಲಿ 515 ಪ್ರಕರಣಗಳು ವರದಿಯಾಗಿವೆ. ಆಂಧ್ರಪ್ರದೇಶದಲ್ಲಿ 1,395 ಪ್ರಕರಣಗಳು ವರದಿಯಾಗಿವೆ.

ನವೆಂಬರ್ 16 ರವರೆಗೆ ಒಟ್ಟು 12,65,42,907 ಕೊರೊನಾ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು