ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ತಾತ್ಕಾಲಿಕ ಆಸ್ಪತ್ರೆಯಾಗಲಿರುವ ಸ್ಟಾರ್‌‌ ಹೋಟೆಲ್‌ಗಳು

ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಹೆಚ್ಚಳ ಬಿಎಂಸಿ ಮತ್ತು ಖಾಸಗಿ ಆಸ್ಪತ್ರೆಗಳ ಹೊಸ ಯೋಜನೆ
Last Updated 15 ಏಪ್ರಿಲ್ 2021, 11:40 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಮಹಾನಗರದಲ್ಲಿ ಪ್ರತಿ ನಿತ್ಯ 9ರಿಂದ 10 ಸಾವಿರ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೃಹನ್ ‌ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಮತ್ತು ಸ್ಟಾರ್‌ ಹೋಟೆಲ್‌ಗಳ ನಡುವೆ ಸಂರ್ಪಕ ಕಲ್ಪಿಸುವ ಯೋಜನೆಯೊಂದನ್ನು ರೂಪಿಸಿದೆ.

ತಾತ್ಕಾಲಿಕವಾಗಿ ಆಸ್ಪತ್ರೆಯಾಗುವ ಈ ಹೋಟೆಲ್‌ಗಳನ್ನು ಸೋಂಕಿನಿಂದ ಚೇತರಿಸಿಕೊಂಡಿರುವ ಹಾಗೂ ಕಡಿಮೆ ವೈದ್ಯಕೀಯ ಸೌಲಭ್ಯಗಳ ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತದೆ.

ಬೃಹನ್‌ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಪ್ರಕಾರ, ‘ಬಿಎಂಸಿ ಮತ್ತು ಖಾಸಗಿ ಆಸ್ಪತ್ರೆಗಳು ಜಂಟಿಯಾಗಿ, ಆಸ್ಪತ್ರೆಗಳಿಗೆ ಸಮೀಪವಿರುವ ಪ್ರಮುಖ ಸ್ಟಾರ್ ಹೋಟೆಲ್‌ಗಳನ್ನು ಗುರುತಿಸಿವೆ. ಈ ಆಸ್ಪತ್ರೆಗಳು ಮತ್ತು ಹೋಟೆಲ್‌ಗಳ ನಡುವೆ ಸಂಪರ್ಕ ಕಲ್ಪಿಸಿ, ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಆಸ್ಪತ್ರೆಯನ್ನಾಗಿಸಲಾಗುತ್ತದೆ.

‘ಸದ್ಯ ಮುಂಬೈನ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಅಗತ್ಯವಿಲ್ಲದಿರುವ ರೋಗಿಗಳು ದಾಖಲಾಗಿರುವುದನ್ನು ಗಮನಿಸಲಾಗಿದೆ. ಅಂತಹ ರೋಗಿಗಳಿಗೆ ಸಾಮಾನ್ಯ ಸೌಲಭ್ಯಗಳಿರುವ ಪ್ರತ್ಯೇಕ ಜಾಗದಲ್ಲಿ ಚಿಕಿತ್ಸೆ ನೀಡುತ್ತಾ, ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ನಿರ್ವಹಣೆ ಮಾಡಬಹುದು. ಇಂಥ ರೋಗಿಗಳನ್ನು ತಾತ್ಕಾಲಿಕ ಆಸ್ಪತ್ರೆಯಾಗುವ ಹೋಟೆಲ್‌ಗಳಿಗೆ ಸ್ಥಳಾಂತರಿಸಬಹುದು‘ ಎಂದು ಚಾಹಲ್ ಹೇಳಿದರು.

ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಪ್ರತಿ ಹೋಟೆಲ್‌ನಲ್ಲಿ ಕನಿಷ್ಠ 20 ಕೊಠಡಿಗಳಿರಬೇಕು. ಮಾತ್ರವಲ್ಲ, ಅಲ್ಲಿ ಕನಿಷ್ಠ ಚಿಕಿತ್ಸಾ ಸೌಲಭ್ಯಗಳಿರಬೇಕು. ಒಂದು ರೀತಿಯ ಆಸ್ಪತ್ರೆಯ ವಿಸ್ತರಣಾ ವಿಭಾಗದಂತೆ ಆ ಹೋಟೆಲ್‌ ಕೆಲಸ ಮಾಡುವಂತಿರಬೇಕು. ಇಂಥ ಹೋಟೆಲ್‌ಗಳಲ್ಲಿ ದಿನವಿಡೀ ವೈದ್ಯಕೀಯ ಸೇವೆಗಳನ್ನು ಒದಗಿಸಬೇಕು‘ ಎಂದು ಅವರು ಹೇಳಿದರು.

ತುರ್ತು ವೈದ್ಯಕೀಯ ನೆರವು ಅಗತ್ಯವಿರದ ರೋಗಿಗಳನ್ನು ಇಂಥ ಸಾಮಾನ್ಯ ವೈದ್ಯಕೀಯ ಸೌಲಭ್ಯಗಳಿರುವ ಹೋಟೆಲ್‌ಗಳಿಗೆ ವರ್ಗಾಯಿಸಿದರೆ, ತುರ್ತು ಸೇವೆಯ ಅಗತ್ಯವಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸುಲಭವಾಗಿ ಆಮ್ಲಜನಕದ ಸೌಲಭ್ಯ ದೊರೆಯುತ್ತದೆ. ಐಸಿಯು ಸೌಲಭ್ಯ ಅಥವಾ ವೆಂಟಿಲೇಟರ್‌ ಸೌಲಭ್ಯವಿರುವ ಕೊಠಡಿಗಳು, ಹಾಸಿಗೆಗಳೂ ದೊರೆಯುತ್ತವೆ. ಇದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿರುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುತ್ತದೆ. ಈ ಉಪಕ್ರಮಗಳಿಂದ ಸಾವಿನ ಪ್ರಮಾಣವೂ ಕಡಿಮೆಯಾಗುತ್ತದೆ‘ ಎಂದು ಚಾಹಲ್ ವಿವರಿಸಿದರು.

ಹೋಟೆಲ್‌ ಮತ್ತು ಆಸ್ಪತ್ರೆಗಳೊಂದಿಗೆ ಸಂರ್ಪಕ ಕಲ್ಪಿಸಿದ ನಂತರ, ಖಾಸಗಿ ಆಸ್ಪತ್ರೆಗಳು ಮತ್ತು ಹೋಟೆಲ್‌ಗಳ ನಡುವೆ ಉತ್ತಮ ಸಮನ್ವಯವಿದ್ದು, ತಮ್ಮ ತಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಚಾಹಲ್ ನಿಬಂಧನೆಗಳನ್ನು ವಿವರಿಸುತ್ತಾರೆ.

ತಾತ್ಕಾಲಿಕ ಆಸ್ಪತ್ರೆಗಳಾಗುವ ಹೋಟೆಲ್‌ಗಳು ಪ್ರತಿ ರೋಗಿಗೆ ₹4 ಸಾವಿರ ದರ ನಿಗದಿಪಡಿಸಿವೆ. ಈ ಹಣದಲ್ಲಿ ಊಟ ಮತ್ತು ತೆರಿಗೆಯೂ ಸೇರುತ್ತದೆ. ಈ ಹಣವನ್ನು ಹೋಟೆಲ್‌ನೊಂದಿಗೆ ಸಂಪರ್ಕ ಹೊಂದಿರುವ ಆಸ್ಪತ್ರೆಗಳು ಭರಿಸುತ್ತವೆ. ಆಸ್ಪತ್ರೆಗಳು ಹೆಚ್ಚುವರಿ ವೈದ್ಯಕೀಯ ವೆಚ್ಚಗಳು, ವೈದ್ಯರ ಭೇಟಿ ಮತ್ತು ಇತರೆ ವೆಚ್ಚವನ್ನು ರೋಗಿಗಳಿಂದ ಪಡೆದುಕೊಳ್ಳುತ್ತವೆ ಎಂದು ಬಿಎಂಸಿ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT