ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕವೂ ಸೇರಿ ಈ ಹತ್ತು ರಾಜ್ಯಗಳಲ್ಲಿ ಸೋಂಕು ಪರೀಕ್ಷೆ ಹೆಚ್ಚಿಸಬೇಕಿದೆ: ಮೋದಿ

ಕೋವಿಡ್ 19 ಪರಿಸ್ಥಿತಿ ಕುರಿತು ಚರ್ಚೆ
Last Updated 11 ಆಗಸ್ಟ್ 2020, 9:57 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ಸಕ್ರಿಯಪ್ರಕರಣಗಳು ಹೆಚ್ಚಾಗಿರುವ ಹತ್ತು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪರೀಕ್ಷೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್‌, ಬಿಹಾರ, ಗುಜರಾತ್, ತೆಲಂಗಾಣ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಈ ಹತ್ತು ರಾಜ್ಯಗಳಲ್ಲಿ ನಾವು ಕೊರೊನಾ ವೈರಸ್‌ ಅನ್ನು ಸೋಲಿಸಿದರೆ, ದೇಶವೂ ಜಯ ಸಾಧಿಸಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಮಾದರಿ ಪರೀಕ್ಷೆ ಪ್ರಮಾಣ ಕಡಿಮೆ ಇರುವ ಮತ್ತು ಸೋಂಕು ದೃಢಪಟ್ಟ ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸಬೇಕಿದೆ. ಮುಖ್ಯವಾಗಿಬಿಹಾರ, ಗುಜರಾತ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕಿದೆ.ಈ ರಾಜ್ಯಗಳಲ್ಲಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ’ ಎಂದಿದ್ದಾರೆ.

ಮುಂದುವರಿದು, ‘ಇಂದು ಸಕ್ರಿಯವಾಗಿರುವ ಶೇ.80 ರಷ್ಟು ಪ್ರಕರಣಗಳು ಈ ಹತ್ತು ರಾಜ್ಯಗಳಲ್ಲಿ ಇವೆ. ಹಾಗಾಗಿ, ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಈ ಹತ್ತು ರಾಜ್ಯಗಳು ಮುಖ್ಯ ಪಾತ್ರ ನಿರ್ವಹಿಸುತ್ತವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷಕ್ಕಿಂತ ಹೆಚ್ಚಾಗಿದೆ. ಬಹುತೇಕ ಪ್ರಕರಣಗಳು ಈ ಹತ್ತು ರಾಜ್ಯಗಳಲ್ಲೇ ಇವೆ’ ಎಂದು ಹೇಳಿದ್ದಾರೆ.

‘ಅದಕ್ಕಾಗಿ ಈ ರಾಜ್ಯಗಳು ಒಟ್ಟಾಗಿ ಕುಳಿತು ಚರ್ಚಿಸುವುದು ಮತ್ತು ವಿಮರ್ಶಿಸುವುದು ಅಗತ್ಯವಾಗಿದೆ. ಪರಸ್ಪರ ಅನುಭವದ ಬಗ್ಗೆಯೂ ಚರ್ಚೆ ಸಡೆಸುವುದರಿಂದ ಸಾಕಷ್ಟು ಕಲಿಯಬಹುದಾಗಿದೆ. ಒಂದು ವೇಳೆ ನಾವು ಈ ಹತ್ತು ರಾಜ್ಯಗಳಲ್ಲಿ ಕೊರೊನಾ ವೈರಸ್‌ ಅನ್ನು ಸೋಲಿಸಿದರೆ, ದೇಶವೂ ಜಯ ಸಾಧಿಸಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ನಿತ್ಯ 7 ಲಕ್ಷ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ ಮತ್ತು ನಿರಂತರವಾಗಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ. ನಾವು ಈ ನಿಟ್ಟಿನಲ್ಲಿ ಗಮನ ಹರಿಸಲು ಸಾಧ್ಯವಾದರೆ, ಸಾವಿನ ಪ್ರಮಾಣವನ್ನು ಶೇ. 1ಕ್ಕಿಂತಲೂ ಕೆಳಗಿಳಿಸಬಹುದಾಗಿದೆ ಎಂದಿದ್ದಾರೆ.

‘ದೇಶದಲ್ಲಿ ಸಾವಿನ ಪ್ರಮಾಣಈ ಮೊದಲು ಪ್ರಪಂಚದ ಸರಾಸರಿಗಿಂತಲೂ ಕಡಿಮೆ ಇತ್ತು. ಇದು ಸಮಾಧಾನದ ಸಂಗತಿಯಾಗಿದೆ. ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಇದರರ್ಥ ನಮ್ಮ ಪ್ರಯತ್ನಗಳು ಪರಿಣಾಮಕಾರಿಯಾಗಿದೆ ಎಂಬುದು ಸಾಬೀತಾಗಿದೆ’ ಎಂದು ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದಇಲ್ಲಿವರೆಗೆ ಪ್ರಧಾನಿಯವರು ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಏಳನೇ ವಿಡಿಯೊ ಸಂವಾದ ಇದಾಗಿದೆ. 3ನೇ ಹಂತದ ಲಾಕ್‌ಡೌನ್ ತೆರವುಗೊಳಿಸಿದ ನಂತರ ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಮೊದಲ ವರ್ಚುವಲ್‌ ಸಭೆ ಇದು.

ದೇಶದಲ್ಲಿ ಇದುವರೆಗೆ ಒಟ್ಟು 22,68,676 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ45,257 ಮಂದಿ ಮೃತಪಟ್ಟಿದ್ದು, 15,83,490 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ 6,39,929 ಸಕ್ರಿಯ ಪ್ರಕರಣಗಳಿವೆ.

ಪ್ರಸ್ತುತ ಕೊರೊನಾ ಸಾವಿನ ಪ್ರಮಾಣ ಶೇ 1.99ರಷ್ಟಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ 69.80ರಷ್ಟಿದ್ದರೆ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 28.21ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT