ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 15 ರಾಜ್ಯಗಳಲ್ಲಿ ಕೋವಿಡ್‌ ಸಾವು ಶೂನ್ಯ

Last Updated 9 ಫೆಬ್ರುವರಿ 2021, 18:41 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ 15 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಇನ್ನೂ 18 ರಾಜ್ಯಗಳಲ್ಲಿ ಕೋವಿಡ್‌ನಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆಯು ಐದಕ್ಕೂ ಕಡಿಮೆ ಇತ್ತು’ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಸತತವಾಗಿ ಕಳೆದ ಎರಡು ವಾರಗಳಿಂದ ಕೋವಿಡ್‌ ಪ್ರಕರಣಗಳು ಮತ್ತು ಸಾವಿನ ಅನುಪಾತವು ಶೇ 1ಕ್ಕಿಂತ ಕಡಿಮೆ ದಾಖಲಾಗಿದೆ. ಐದು ವಾರಗಳಲ್ಲಿ ಕೋವಿಡ್‌ ದೈನಂದಿನ ಸಾವಿನ ಸರಾಸರಿ ಸಂಖ್ಯೆಯು ಶೇ 55ರಷ್ಟು ಇಳಿಕೆಯಾಗಿದೆ.

24 ಗಂಟೆಗಳಲ್ಲಿ ಸಾವು ಸಂಭವಿಸದಿರುವ ದೊಡ್ಡ ಹಾಗೂ ಹೆಚ್ಚು ಜನಸಂಖ್ಯೆಯ ರಾಜ್ಯಗಳ ಪಟ್ಟಿಯಲ್ಲಿ ಜಾರ್ಖಂಡ್‌, ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಸೇರಿವೆ. ಕೇರಳ, ಮಹಾರಾಷ್ಟ್ರ ಹಾಗೂ ಪಂಜಾಬ್‌ ರಾಜ್ಯಗಳನ್ನು ಬಿಟ್ಟು, ಉಳಿದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಐದಕ್ಕೂ ಕಡಿಮೆ ಸಾವುಗಳು ಸಂಭವಿಸಿವೆ. ಕರ್ನಾಟಕದಲ್ಲಿ ಮೂರು ಸಾವುಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್‌ನಿಂದಾಗಿ ಸಂಭವಿಸಿದ ಒಟ್ಟು 78 ಸಾವುಗಳಲ್ಲಿ, 42 ಸಾವುಗಳು ಕೇರಳ (16), ಮಹಾರಾಷ್ಟ್ರ (15) ಹಾಗೂ ಪಂಜಾಬ್‌ (11)ನಲ್ಲಿ ದಾಖಲಾಗಿವೆ. ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ಸಹ 5,000ಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ.

‘ಜನವರಿಗೆ ಹೋಲಿಸಿದರೆ ಈ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ
ಯಾಗಿದೆ. ಆದರೆ, ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯ ಹಾದಿ ಹಿಡಿದಿದೆ’ ಎಂದು ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ.

ಫೆಬ್ರುವರಿ 20ರ ವೇಳೆಗೆ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಸುತ್ತಿನ ಲಸಿಕೆ ನೀಡಿ, 24ರಿಂದ ಎರಡನೇ ಸುತ್ತಿನ ಲಸಿಕಾ ಅಭಿಯಾನ ಆರಂಭಿಸುವಂತೆ ಅವರು ಎಲ್ಲಾ ರಾಜ್ಯ ಗಳಿಗೆ ಸಲಹೆ ನೀಡಿದ್ದಾರೆ. ಮಾರ್ಚ್‌ 6ರೊಳಗೆ ಎಲ್ಲಾ ಮುಂಚೂಣಿಯ ಕಾರ್ಯಕರ್ತರಿಕೆ ಲಸಿಕೆಗಳನ್ನು ಹಾಕಿಸುವ ಗುರಿ ಇರಿಸಲಾಗಿದೆ. ಈವರೆಗೆ ಸುಮಾರು 60 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಅವರಲ್ಲಿ ಹೆಚ್ಚಿನವರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT