ಭಾನುವಾರ, ಸೆಪ್ಟೆಂಬರ್ 26, 2021
27 °C
44 ಜಿಲ್ಲೆಗಳಲ್ಲಿ ಕೋವಿಡ್‌ ದೃಢಪಡುವಿಕೆ ದರವು ಶೇ 10ಕ್ಕೂ ಹೆಚ್ಚು

ಕೋವಿಡ್-19: ಎಂಟು ರಾಜ್ಯಗಳಲ್ಲಿ ಸೋಂಕು ತೀವ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇರಳ, ತಮಿಳುನಾಡು, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿ ಎಂಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌ ಆರ್‌ ಸಂಖ್ಯೆ 1ಕ್ಕಿಂತಲೂ ಹೆಚ್ಚು ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೋವಿಡ್‌ ಸೋಂಕು ಹರಡುವ ವೇಗವನ್ನು ಆರ್‌ ಸಂಖ್ಯೆಯಲ್ಲಿ (ರಿಪ್ರೊಡಕ್ಷನ್ ನಂಬರ್) ಗುರುತಿಸಲಾಗುತ್ತದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ಎಷ್ಟು ಜನಕ್ಕೆ ಸೋಂಕು ಹರಡುತ್ತದೆ ಎಂಬುದನ್ನು ಆರ್‌ ಸಂಖ್ಯೆ ಸೂಚಿಸುತ್ತದೆ. ಈ ಸಂಖ್ಯೆ 1ಕ್ಕಿಂತಲೂ ಕಡಿಮೆ ಇದ್ದರೆ, ಸೋಂಕು ನಿಧಾನವಾಗಿ ಹರಡುತ್ತಿದೆ ಎಂದು ಅರ್ಥ. ಈ ಸಂಖ್ಯೆ 1 ಮತ್ತು ಅದಕ್ಕಿಂತಲೂ ಹೆಚ್ಚು ಇದ್ದರೆ, ಸೋಂಕು ವೇಗವಾಗಿ ಹರಡುತ್ತಿದೆ ಎಂದು ಅರ್ಥ.

ಕಳೆದ ಒಂದು ವಾರದಲ್ಲಿ ದೇಶದಾದ್ಯಂತ ಪತ್ತೆಯಾದ ಹೊಸ ಪ್ರಕರಣಗಳಲ್ಲಿ ಕೇರಳ ರಾಜ್ಯವೊಂದರಲ್ಲೇ ಶೇ 49.58ರಷ್ಟು ಪ್ರಕರಣಗಳು ಪತ್ತೆಯಾಗಿವೆ.

‘ಭಾರತದಲ್ಲಿ ಕೋವಿಡ್‌ ಸಾಂಕ್ರಾಮಿಕವು ಇನ್ನೂ ಮುಗಿದಿಲ್ಲ. ಕೋವಿಡ್‌ ಎರಡನೇ ಅಲೆಯೇ ಮುಗಿದಿಲ್ಲ. ವಿಶ್ವದ ಹಲವೆಡೆ ಕೋವಿಡ್‌ ಸಾಂಕ್ರಾಮಿಕ ಮುಗಿದಿಲ್ಲ. ವಿಶ್ವದಲ್ಲಿ ಪ್ರತಿದಿನ ಒಟ್ಟು 4.7 ಲಕ್ಷ ಕೋವಿಡ್‌ ಪ್ರಕರಣಗಳು ಹೊಸದಾಗಿ ಪತ್ತೆಯಾಗುತ್ತಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 44 ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು ದೃಢಪಡುವ ದರ (ಪಾಸಿಟಿವಿಟಿ ರೇಟ್) ಶೇ 10ಕ್ಕೂ ಹೆಚ್ಚು. ಕೇರಳ, ಮಹಾರಾಷ್ಟ್ರ, ಮಣಿಪುರ ಮತ್ತು ಅರುಣಾಚಲ ಪ್ರದೇಶದ 18 ಜಿಲ್ಲೆಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಾಲ್ಕು ವಾರಗಳಿಂದಲೂ ಈ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಶೀಲ್ಡ್‌ ಉತ್ಪಾದನೆ ಹೆಚ್ಚಳ

ನವದೆಹಲಿ: ವರ್ಷಾಂತ್ಯದ ವೇಳೆಗೆ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ತಿಂಗಳಿಗೆ 12 ಕೋಟಿ ಹಾಗೂ ಕೋವ್ಯಾಕ್ಸಿನ್‌ನ ಉತ್ಪಾದನೆಯನ್ನು 5.8 ಕೋಟಿ ಡೋಸ್‌ಗಳಿಗೆ ಹೆಚ್ಚಿಸಲು ಯೋಜಿಸಲಾಗಿದೆ ಇದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಗಳವಾರ ಮಾಹಿತಿ ನೀಡಿದೆ.

ಕೋವಿಡ್‌–19 ಲಸಿಕೆಗಳನ್ನು ಉತ್ಪಾದಿಸುವ ಕಂಪನಿಗಳು ಒದಗಿಸಿರುವ ಮಾಹಿತಿಯನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಈ ವಿಷಯ ತಿಳಿಸಿದರು.

ಲಸಿಕೆಗಳನ್ನು ತಯಾರಿಸುವ ಕಂಪನಿಗಳ ಸದ್ಯದ ಉತ್ಪಾದನಾ ಸಾಮರ್ಥ್ಯ ಹಾಗೂ ಡಿಸೆಂಬರ್‌ ವೇಳೆಗೆ ಉತ್ಪಾದನಾ ಸಾಮರ್ಥ್ಯದಲ್ಲಿ ಎಷ್ಟು ಹೆಚ್ಚಳ ಮಾಡಲಾಗುವುದು ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.

ಕೋವಿಡ್‌–19 ಲಸಿಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಅಧೀನದ ಬಯೋಟೆಕ್ನಾಲಜಿ ಇಲಾಖೆಯು ‘ಮಿಷನ್‌ ಕೋವಿಡ್‌ ಸುರಕ್ಷಾ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸಾರ್ವಜನಿಕ ವಲಯದ ಉದ್ಯಮವಾದ  ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟನ್ಸ್‌ ಕೌನ್ಸಿಲ್‌ (ಬಿಐಆರ್‌ಎಸಿ) ಈ ಕಾರ್ಯಕ್ರಮವನ್ನು ಜಾರಿಗೊಳಿಸುವುದು ಎಂದು ಅವರು ಮಾಹಿತಿ ನೀಡಿದರು.

4 ಕಂಪನಿಗಳಿಂದ ಲಸಿಕೆ ಉತ್ಪಾದನೆ: ‘ದೇಶದ ಇನ್ನೂ ನಾಲ್ಕು ಔಷಧ ಕಂಪನಿಗಳು ಅಕ್ಟೋಬರ್‌–ನವೆಂಬರ್‌ ವೇಳೆಗೆ ಕೋವಿಡ್‌ ಲಸಿಕೆಗಳ ಉತ್ಪಾದನೆಯನ್ನು ಆರಂಭಿಸುವ ನಿರೀಕ್ಷೆ ಇದೆ’ ಎಂದು ಸಚಿವ ಮಾಂಡವೀಯ ತಿಳಿಸಿದರು.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಈ ವಿಷಯ ತಿಳಿಸಿದ ಅವರು, ‘ಲಸಿಕೆ ಉತ್ಪಾದನೆ ಹೆಚ್ಚಾಗುವುದರಿಂದ ಲಸಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ಸಿಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನವೆಂಬರ್‌ ವೇಳೆಗೆ ಬಯೋಲಾಜಿಕಲ್ಸ್ ಇ ಹಾಗೂ ನೋವಾರ್ಟಿಸ್‌ ಕಂಪನಿಗಳ ಲಸಿಕೆಗಳು ಸಹ ಮಾರುಕಟ್ಟೆಗೆ ಬರಲಿವೆ. ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಝೈಡಸ್‌–ಕ್ಯಾಡಿಲಾ ಕಂಪನಿಯ ಔಷಧಕ್ಕೆ ತಜ್ಞರ ಸಮಿತಿ ಅನುಮೋದನೆ ಸಿಗುವ ಸಾಧ್ಯತೆ’ ಎಂದೂ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು