ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ವರ್ಷ ಕಳೆದರೂ ಕಾಡುವ ‘ಕೋವಿಡ್’ ನೆನಪುಗಳು

ದೇಶದಲ್ಲಿ ಮೊದಲ ಪ್ರಕರಣ ವರದಿ
Last Updated 29 ಜನವರಿ 2021, 19:30 IST
ಅಕ್ಷರ ಗಾತ್ರ

ತಿರುವನಂತಪುರ: ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ಕೇರಳದ ಯುವತಿಯ ಕುಟುಂಬಕ್ಕೆ ವರ್ಷ ಕಳೆದರೂ ಕೋವಿಡ್‌ ನೆನಪುಗಳು ಮಾತ್ರ ಮಾಸಿಲ್ಲ.

ಕೇರಳದ ತ್ರಿಶ್ಯೂರ್ ಜಿಲ್ಲೆಯ ಕೊಡುಂಗಲ್ಲೂರು ಗ್ರಾಮದಲ್ಲಿನ ಕುಟುಂಬವೊಂದರ 20ರ ಹರೆಯದ ಯುವತಿ ಚೀನಾದ ವುಹಾನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಕಳೆದ ವರ್ಷ ಜನವರಿ 30ಕ್ಕೆ ಕೋವಿಡ್‌ಗೆ ತುತ್ತಾಗಿದ್ದ ಆ ಯುವತಿ ದೇಶದ ಮೊದಲ ಕೋವಿಡ್ ರೋಗಿಯಾಗಿದ್ದರು. ಯುವತಿ ಈಗ ಕೋವಿಡ್‌ನಿಂದ ಚೇತರಿಸಿಕೊಂಡು ಒಂದು ವರ್ಷವಾಗಿದೆಯಾದರೂ, ಯುವತಿಯ ಕುಟುಂಬಕ್ಕೆ ಕೋವಿಡ್‌ನ ನೆನಪುಗಳು ಇಂದಿಗೂ ಮಾಸಿಲ್ಲ.

‘ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ನನ್ನ ಮಗಳಿಗೆ ಇದುವರೆಗೆ ಯಾವುದೇ ಕಾಯಿಲೆಗಳು ಕಾಡಿಲ್ಲ’ ಎಂದು ಯುವತಿಯ ತಾಯಿ ನಸೀಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವುಹಾನ್‌ನಿಂದ ಭಾರತಕ್ಕೆ ಬಂದ ನಂತರ ಪುನಃ ಅಲ್ಲಿಗೆ ತೆರಳಲು ಸಾಧ್ಯವಾಗದ ಯುವತಿ ಆನ್‌ಲೈನ್ ಮೂಲಕವೇ ತಮ್ಮ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ‘ಪರೀಕ್ಷೆಗಳು ಹತ್ತಿರವಿರುವುದರಿಂದ ಮನೆಯಿಂದ ದೂರವುಳಿದು ಮಗಳು ಸಂಪೂರ್ಣವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾಳೆ’ ಎಂದು ಯುವತಿಯ ತಾಯಿ ಮಾಹಿತಿ ನೀಡಿದ್ದಾರೆ.

ಅಂದಿನ ಈ ದಿನ: ‘ಕಳೆದ ವರ್ಷ ಜನವರಿ 30ಕ್ಕೆ ನನ್ನ ಮಗಳಿಗೆ ಕೋವಿಡ್ ಪಾಸಿಟಿವ್ ಎಂದು ವರದಿ ಬಂದಾಗ ಇಡೀ ಕುಟುಂಬದವರು ಭಯಭೀತರಾಗಿದ್ದೆವು. ಆದರೆ, ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಮಗಳು ಮಾತ್ರ ಅಂಜದೇ, ‘ಇದು ನನ್ನ ಆರೋಗ್ಯಕ್ಕೆ ಹೆಚ್ಚಿನ ಹಾನಿ ಮಾಡುವುದಿಲ್ಲ. ಧೈರ್ಯವಾಗಿರಿ’ ಎಂದು ವುಹಾನ್‌ನಿಂದಲೇ ನಿರಂತರ ಫೋನ್ ಕರೆಗಳ ಮೂಲಕ ಕುಟುಂಬಕ್ಕೆ ಧೈರ್ಯ ತುಂಬಿದ್ದಳು...’ ಎಂದು ಯುವತಿಯ ತಾಯಿ ನೆನಪಿಸಿಕೊಂಡಿದ್ದಾರೆ.

ಯುವತಿ ಒಂದು ತಿಂಗಳ ಐಸೋಲೇಷನ್‌ನಲ್ಲಿ ಇರಬೇಕಾದ ಸಂದರ್ಭದಲ್ಲಿ ಕೇರಳದ ಆರೋಗ್ಯ ಇಲಾಖೆ ಯುವತಿ ಮತ್ತು ಆಕೆಯ ಕುಟುಂಬದ ಬಗ್ಗೆ ಕಾಳಜಿ ವಹಿಸಿತು. ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಯುವತಿಗೆ ಧೈರ್ಯ ತುಂಬಿದ್ದರು. ಆರೋಗ್ಯ ಇಲಾಖೆಯು ತಮ್ಮ ಕುಟುಂಬದ ದೈಹಿಕ–ಮಾನಸಿಕ ಆರೋಗ್ಯದ ಕುರಿತು ವಹಿಸಿದ ಕಾಳಜಿಗಾಗಿ ಸರ್ಕಾರಕ್ಕೆ ಕುಟುಂಬವು ಧನ್ಯವಾದ ಸಲ್ಲಿಸಿದೆ.

ವುಹಾನ್‌ನಿಂದ ಭಾರತಕ್ಕೆ ಹಿಂತಿರುಗಿದ್ದ ಕೇರಳದ ವಿದ್ಯಾರ್ಥಿಗಳ ಪೈಕಿ ಮೂವರಿಗೆ ಕೋವಿಡ್ ಸೋಂಕು ತಗುಲಿತ್ತು. ಇವು ದೇಶದ ಮೊದಲ ಮೂರು ಕೋವಿಡ್ ಪ್ರಕರಣಗಳೆಂದು ವರದಿಯಾಗಿದ್ದವು.

ಆರಂಭದ ದಿನಗಳಲ್ಲಿ ಕೇರಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇತರ ರಾಜ್ಯಗಳಿಗಿಂತ ಕಡಿಮೆ ಇತ್ತು. ಆದರೆ, ಹೊರ ರಾಜ್ಯಗಳು ಮತ್ತು ದೇಶಗಳಿಂದ ಕೇರಳದ ನಾಗರಿಕರು ಕೇರಳಕ್ಕೆ ಹಿಂತಿರುಗಿ ಬಂದಾಗ ಅಲ್ಲಿಯೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತ್ತು. ಪ್ರಸ್ತುತ ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಕೇರಳವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT