ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೂಹ ಪ್ರತಿರೋಧಕ್ಕೆ ಕೋವಿಡ್ ರೂಪಾಂತರ ತಳಿಯ ಸವಾಲು

ದೆಹಲಿಯಲ್ಲಿನ ಕೋವಿಡ್ ಸ್ಥಿತಿ ಅಧ್ಯಯನ ವರದಿಯಲ್ಲಿ ಉಲ್ಲೇಖ
Last Updated 15 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ನ ಬೇರೆ ತಳಿಗಳಿಂದ ಸೋಂಕಿಗೆ ಒಳಗಾಗಿದ್ದವರು, ಡೆಲ್ಟಾ ತಳಿಯ ಸೋಂಕಿಗೂ ಒಳಗಾಗಿದ್ದಾರೆ. ಇದು ಸಮೂಹ ಪ್ರತಿರೋಧ ಶಕ್ತಿಯು ಅಭಿವೃದ್ಧಿಯಾಗುವಲ್ಲಿ ಇರುವ ಸವಾಲುಗಳನ್ನು ತೋರಿಸುತ್ತದೆ. ದೆಹಲಿಯಲ್ಲಿ ಈ ವರ್ಷ ತಲೆದೋರಿದ ಕೋವಿಡ್‌ ಎರಡನೇ ಅಲೆಯ ಸಂದರ್ಭದ ಪ್ರಕರಣಗಳ ಅಧ್ಯಯನದಿಂದ ಇದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎನ್‌ಸಿಡಿಸಿ, ಸಿಎಸ್‌ಐಆರ್-ಐಜಿಐಬಿ, ಲಂಡನ್‌ನ ಕೇಂಬ್ರಿಜ್‌, ಇಂಪೀರಿಯಲ್ ಕಾಲೇಜ್‌ ಮತ್ತು ಡೆನ್ಮಾರ್ಕ್‌ನ ಕೋಪೆನ್‌ಹೇಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದು ಬಂದಿದೆ.

‘ದೆಹಲಿಯಲ್ಲಿ 2020ರ ಮಾರ್ಚ್‌, ಜೂನ್, ಸೆಪ್ಟೆಂಬರ್‌, ನವೆಂಬರ್‌ನಲ್ಲಿ ಮತ್ತು 2021ರ ಮಾರ್ಚ್‌-ಏಪ್ರಿಲ್‌ನಲ್ಲಿ ಕೋವಿಡ್‌ ಸೋಂಕಿನ ತೀವ್ರತೆ ಹೆಚ್ಚಾಗಿತ್ತು. ಈ ಹಿಂದಿನ ಬಾರಿ ಸೋಂಕು ತೀವ್ರತೆ ಪಡೆದಿದ್ದಾಗ, ದೆಹಲಿಯ ಶೇ 56.1ರಷ್ಟು ಮಂದಿಗೆ ಸೋಂಕು ಹರಡಿತ್ತು ಎಂದು ಸೆರೊ ಸಮೀಕ್ಷೆಗಳು ಹೇಳಿದ್ದವು. ಇದು ದೆಹಲಿಯ ಜನತೆಯಲ್ಲಿ ಸಮೂಹ ಪ್ರತಿರೋಧ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದೇಶದಲ್ಲಿ ಎರಡನೇ ಅಲೆ ತೀವ್ರವಾದಾಗ, ದೆಹಲಿಯಲ್ಲೂ ಸೋಂಕು ತೀವ್ರವಾಗಿ ಹರಡಿತ್ತು. ಅಲ್ಲದೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿತ್ತು’ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

‘ಇಂತಹ ಸೋಂಕು ಅಂತ್ಯವಾಗಲು ಸಮೂಹ ಪ್ರತಿರೋಧ ಶಕ್ತಿ ಅಭಿವೃದ್ಧಿಯಾಗುವುದು ಅನಿವಾರ್ಯವಾಗಿದೆ. ಆದರೆ ದೆಹಲಿಯಲ್ಲಿ ಇನ್ನೂ ಪ್ರತಿರೋಧ ಶಕ್ತಿ ಈ ಹಂತ ತಲುಪಿಲ್ಲ ಎಂಬುದು ಎರಡನೇ ಅಲೆ ತೀವ್ರತೆ ಪಡೆದಾಗ ಪತ್ತೆಯಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಕೋವಿಡ್‌ ಲಸಿಕೆ ಪಡೆದವರಲ್ಲೂ ಡೆಲ್ಟಾ ತಳಿ ತೀವ್ರವಾಗಿ ಹರಡಿದೆ. ಲಸಿಕೆ ಪಡೆದುಕೊಂಡ ನಂತರ ದೇಹದಲ್ಲಿ ಅಭಿವೃದ್ಧಿಯಾದ ಪ್ರತಿರೋಧ ಶಕ್ತಿಯನ್ನು ಡೆಲ್ಟಾ ತಳಿ ನಿಷ್ಕ್ರಿಯ ಮಾಡುತ್ತದೆ. ಆನಂತರ ದೇಹದಲ್ಲಿ ತೀವ್ರವಾಗಿ ವ್ಯಾಪಿಸುತ್ತದೆ ಎಂಬುದು ಪತ್ತೆಯಾಗಿದೆ. ಹೀಗಾಗಿ ಲಸಿಕೆಯ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ’ ಎಂದು ಅಧ್ಯಯನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT