ಸೋಮವಾರ, ಮೇ 17, 2021
21 °C
'ಪೂರ್ವಸಿದ್ಧತೆ ಬದಲು ವರ್ಚಸ್ಸು ಹೆಚ್ಚಿಸಲು ಆದ್ಯತೆ'

ಕೋವಿಡ್: ಇಂದಿನ ಹದಗೆಟ್ಟ ಸ್ಥಿತಿಗೆ ಪ್ರಧಾನಿ ನೇರ ಕಾರಣ -ರಾಹುಲ್ ಗಾಂಧಿ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ, ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿಭಾಯಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ‘ವಿಜ್ಞಾನಿಗಳ ಸೂಚನೆ ಸೇರಿದಂತೆ ಆರಂಭಿಕ ಎಚ್ಚರಿಕೆಗಳನ್ನು ಸರ್ಕಾರ ಕಡೆಗಣಿಸಿದ್ದೇ ಇಂದಿನ ಹದಗೆಟ್ಟ ಸ್ಥಿತಿಗೆ ಕಾರಣ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

‘ಪ್ರತಿದಿನ ಬೆಳಿಗ್ಗೆ ಎದ್ದಕೂಡಲೇ ಸಾವುನೋವಿನ ಸುದ್ದಿಗಳೇ ರಾಚುತ್ತವೆ. ಇದು ಅಲೆಯಲ್ಲ, ಸುನಾಮಿ. ಎಲ್ಲೆಲ್ಲೂ ಸರತಿ ಸಾಲುಗಳೇ ಕಾಣುತ್ತವೆ. ಆಮ್ಲಜನಕ ಸಿಲಿಂಡರ್ ಪಡೆಯಲು, ಸಿಲಿಂಡರ್ ಭರ್ತಿ ಮಾಡಿಸಲು, ಜೀವರಕ್ಷಣ ಔಷಧ ಖರೀದಿಸಲು, ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಪಡೆಯಲು, ಸ್ಮಶಾನಗಳಲ್ಲಿ ಹೆಣಗಳನ್ನು ಸುಡಲು ಜನರ ಸಾಲು ಕಾಣುತ್ತಿದೆ. ಭಾರತವು ಕೊರೊನಾ ವೈರಸ್‌ನ ಕೇಂದ್ರಬಿಂದುವಾಗಿದೆ. ಭಾರತದ ಈ ಪರಿಸ್ಥಿತಿ ಕಂಡು ಇಡೀ ಜಗತ್ತು ಗಾಬರಿಗೊಂಡಿದೆ ಎಂದರು.

‘ಎಚ್ಚರಿಕೆಯನ್ನು ಪರಿಗಣಿಸಿದ್ದರೆ ನಾವು ಇನ್ನಷ್ಟು ಸಜ್ಜಾಗಬಹುದಿತ್ತು. ಈಗ ಸರ್ಕಾರ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ಪ್ರಧಾನಿಯವರ ವರ್ಚಸ್ಸು ಕಾಪಾಡುವುದು ಮತ್ತು ಇತರರ ಮೇಲೆ ಆರೋಪ ಹೊರಿಸಲು ಅವರು ಸಮಯ ಮೀಸಲಿಟ್ಟಿದ್ದರು ಎಂದು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಈ ಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣ. ಅವರು ಹೆಚ್ಚು ಕೇಂದ್ರೀಕೃತ ಮತ್ತು ವೈಯಕ್ತಿಕಗೊಳಿಸಿದ ಸರ್ಕಾರಿ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ವರ್ಚಸ್ಸು ಹೆಚ್ಚಿಸುವ ಕೆಲಸಗಳನ್ನಷ್ಟೇ ಅವರು ಮಾಡುತ್ತಾರೆ. ಮುಂದಾಗಬಹುದಾದ ಅವಘಡ ಎದುರಿಸಲು ಸಿದ್ಧರಾಗುವಂತೆ ಸರ್ಕಾರಕ್ಕೆ 2020ರಲ್ಲೇ ಸಲಹೆ ನೀಡಿದ್ದರೂ, ನನ್ನ ಮಾತನ್ನು ಕೇಳಿಸಿಕೊಳ್ಳಲಿಲ್ಲ. ನಾನಷ್ಟೇ ಅಲ್ಲ. ಯಾರೇ ಎಚ್ಚರಿಸಿದರೂ ನಿರ್ಲಕ್ಷ್ಯ ಮುಂದುವರಿಯಿತು ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ ವಿರುದ್ಧ ಸರ್ಕಾರ ಜಯ ಸಾಧಿಸಿದೆ ಎಂದು ಬಣ್ಣಿಸಿದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿತು. ಸ್ವತಃ ಪ್ರಧಾನಿಯವರೂ ಕೋವಿಡ್ ಯುದ್ಧದಲ್ಲಿ ಗೆದ್ದಿದ್ದೇವೆ ಎಂದರು. ಆದರೆ ಅದು ಎರಡನೇ ಅಲೆಯ ಆರಂಭವಾಗಿತ್ತು. ಅದಕ್ಕೆ ಸಿದ್ಧತೆ ಮಾಡಿಕೊಳ್ಳುವ ಬದಲು ಸಂಭ್ರಮದಲ್ಲಿ ತೊಡಗಿದ್ದು ತೊಡಕಾಯಿತು.

‘ಕೋವಿಡ್ ಅನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಾವು ಆಗ್ರಹಿಸಿದ್ದೇವೆ. ಹಾಗೆ ಘೋಷಿಸಿದರಷ್ಟೇ ಸಾಲದು. ಸಮಸ್ಯೆ ಎಂದರೆ, ಸರ್ಕಾರ ಘೋಷಣೆ ಮಾಡಿ ನಾಪತ್ತೆಯಾಗಿಬಿಡುತ್ತದೆ. ಪರಿಸ್ಥಿತಿ ಈಗ ಕೈಮೀರಿರುವುದರಿಂದ ಕೇಂದ್ರವು ರಾಜ್ಯಗಳಿಗೆ ಸಮಸ್ಯೆಯನ್ನು ವರ್ಗಾಯಿಸಿದೆ. ರಾಜ್ಯಗಳು ಹಾಗೂ ಜನರನ್ನು ಸರ್ಕಾರ ನಿಜಕ್ಕೂ ಆತ್ಮನಿರ್ಭರ ಮಾಡಿದೆ. ಪ್ರಧಾನಿ ಸೇರಿದಂತೆ ಯಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು