ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕೋವಿಡ್‌ ಲಸಿಕೆ ದಾಖಲೆ: 9 ತಿಂಗಳಲ್ಲಿ 100 ಕೋಟಿ ಡೋಸ್‌ ಲಸಿಕೆ ವಿತರಣೆ

Last Updated 21 ಅಕ್ಟೋಬರ್ 2021, 5:29 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪಿಡುಗಿನ ವಿರುದ್ಧ ದೇಶದಾದ್ಯಂತ ಆರಂಭವಾದ ಲಸಿಕಾ ಅಭಿಯಾನವು 9 ತಿಂಗಳ ಬಳಿಕ 100 ಕೋಟಿ ಡೋಸ್‌ಗಳನ್ನು ಪೂರ್ಣಗೊಳಿಸಿದೆ. ಭಾರತ ಈ ಮಹತ್ವದ ಮೈಲಿಗಲ್ಲನ್ನು ಗುರುವಾರ ದಾಖಲಿಸಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಟ್ವೀಟಿಸಿದ್ದಾರೆ.

ಮೋದಿ ಭೇಟಿ: 100 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ್‌ ಮನೋಹರ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು. ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

'ಕೋವಿಡ್‌ ಲಸಿಕೆ ಅಭಿಯಾನ ಶುರುವಾಗಿ ಕೇವಲ 9 ತಿಂಗಳಲ್ಲಿ 100 ಕೋಟಿ ಡೋಸ್‌ ಲಸಿಕೆ ವಿತರಿಸಿರುವುದು ಯಾವುದೇ ರಾಷ್ಟ್ರಕ್ಕೇ ಆದರೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ' ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ.ಪೌಲ್‌ ಹೇಳಿದ್ದಾರೆ.

ಭಾರತದ ಜನರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿರುವ ಅವರು, 'ಲಸಿಕೆ ಅಭಿಯಾನವು ಸ್ಥಿರವಾಗಿ ಮುಂದುವರಿಯುವುದು ಮುಖ್ಯವಾಗಿದೆ. ದೇಶದ ಶೇಕಡ 75ರಷ್ಟು ವಯಸ್ಕರಿಗೆ ಮೊದಲ ಡೋಸ್‌ ಲಸಿಕೆ ಹಾಕಲಾಗಿದ್ದು, ಶೇಕಡ 25ರಷ್ಟು ವಯಸ್ಕರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಉಚಿತ ಲಸಿಕೆ ಪಡೆಯಲು ಅರ್ಹರಾಗಿದ್ದರೂ ಅವರು ದೂರ ಉಳಿದಿದ್ದಾರೆ' ಎಂದಿದ್ದಾರೆ.

ದೇಶದ ಶೇಕಡ 30ರಷ್ಟು ಜನರು ಮಾತ್ರವೇ ಕೋವಿಡ್‌–19 ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ಈಗಾಗಲೇ ಮೊದಲ ಡೋಸ್‌ ಲಸಿಕೆ ಪಡೆದಿರುವ ಸುಮಾರು 10 ಕೋಟಿ ಜನರು ಎರಡನೇ ಡೋಸ್‌ ಲಸಿಕೆ ಪಡೆಯಬೇಕಿದೆ. ಅವರಿಗೆ 2ನೇ ಡೋಸ್‌ ಹಾಕಿಸಿಕೊಳ್ಳುವಂತೆ ನೆನಪಿಸುವ ಸಂದೇಶಗಳನ್ನು ಕಳುಹಿಸಬೇಕಿದೆ ಎಂದು ಪೌಲ್‌ ತಿಳಿಸಿದ್ದಾರೆ.

ಕೋವಿನ್‌ ಪೋರ್ಟಲ್‌ನಲ್ಲಿ ಬುಧವಾರ ದಾಖಲಾಗಿದ್ದ ಅಂಕಿ ಅಂಶಗಳ ಪ್ರಕಾರ ದೇಶದಾದ್ಯಂತ 99.85 ಕೋಟಿ ಡೋಸ್‌ ಲಸಿಕೆ ನೀಡಲಾಗಿತ್ತು.

ಎಲ್ಲ ಅರ್ಹರು ವಿಳಂಬ ಮಾಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಕೋರಿರುವ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು, ಈ ಮೂಲಕ ಭಾರತದ ಐತಿಹಾಸಿಕ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.

100 ಕೋಟಿ ಡೋಸ್‌ ಲಸಿಕೆ ಹಾಕಿದ ಸಾಧನೆಯ ಬಗ್ಗೆ ರೈಲು, ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಧ್ವನಿವರ್ಧಕಗಳ ಮೂಲಕ ಮಾಹಿತಿ ಭಿತ್ತರಿಸಲು ಸರ್ಕಾರ ಯೋಜಿಸಿದೆ. ಅಲ್ಲದೆ ಈ ವೇಳೆ ದೆಹಲಿಯ ಕೆಂಪುಕೋಟೆಯಲ್ಲೂ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿ ಸಚಿವ ಮನ್‌ಸುಖ್‌ ಮಾಂಡವೀಯ ಅವರು ಗಾಯಕ ಕೈಲಾಶ್ ಖೇರ್ ಅವರ ಹಾಡು ಮತ್ತು ದೃಶ್ಯ –ಶ್ರವಣ ಫಿಲಂ ಅನ್ನು ಬಿಡುಗಡೆ ಮಾಡುವರು.

ವಿಶ್ವದಲ್ಲಿ ಇಲ್ಲಿಯವರೆಗೆ ಚೀನಾ ಮಾತ್ರ 100 ಕೋಟಿ ಡೋಸ್‌ ಲಸಿಕೆ ನೀಡಿರುವ ಸಾಧನೆ ಮಾಡಿದೆ. ಅದು ಜೂನ್‌ನಲ್ಲಿಯೇ ಈ ಸಾಧನೆ ಮಾಡಿತ್ತು. ಅದರ ನಂತರ ಈ ಮೈಲಿಗಲ್ಲು ದಾಟಿರುವದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ದಿನ ದೇಶದಲ್ಲಿ 2.5 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡುವ ಮೂಲಕ ಭಾರತ ಸಾಧನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT