ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಸೋಂಕು ಪ್ರಮಾಣ: ರಾಜ್ಯಗಳಿಗೆ ಕೇಂದ್ರ ಪತ್ರ

ಹೆಚ್ಚಿದ ಸೋಂಕು; ತಮಿಳುನಾಡು, ಕೇರಳ, ಒಡಿಶಾ ರಾಜ್ಯಗಳಿಗೂ ಪತ್ರ
Last Updated 4 ಡಿಸೆಂಬರ್ 2021, 19:40 IST
ಅಕ್ಷರ ಗಾತ್ರ

ನವದೆಹಲಿ: ಹೊಸ‌ಕೋವಿಡ್ ಪ್ರಕರಣಗಳು, ವಾರದ ಪಾಸಿಟಿವಿಟಿ ದರ ಮತ್ತು ಮರಣ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಿಗೆ ಶನಿವಾರ ಪತ್ರ ಬರೆದಿದೆ.

ಸೋಂಕು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ, ಮಿಜೋರಾಂ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಆರೋಗ್ಯ ಸಚಿವಾಲಯ ಸೂಚಿಸಿದೆ.

‘ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಹೆಚ್ಚಿಸಬೇಕು, ಕೋವಿಡ್ ಹಾಟ್‌ಸ್ಪಾಟ್‌ಗಳ ಮೇಲ್ವಿಚಾರಣೆ ಮಾಡಬೇಕು, ಕೋವಿಡ್ ಪಾಸಿಟಿವ್ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆಹಚ್ಚಬೇಕು, ಎಲ್ಲ ಪಾಸಿಟಿವ್ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು, ಆರೋಗ್ಯ ಮೂಲಸೌಕರ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು’ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಡಿಸೆಂಬರ್ 3ಕ್ಕೆ ಕೊನೆಗೊಂಡಂತೆ 30 ದಿನಗಳಲ್ಲಿ ಒಟ್ಟು 8,073 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕರ್ನಾಟಕದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಮತ್ತು ಸಾವಿನ ಪ್ರಮಾಣ ನಿಧಾನವಾಗಿ ಏರುತ್ತಿದೆ ಎಂದು ತಿಳಿಸಲಾಗಿದೆ.

ಎರಡೂ ಡೋಸ್‌; ವಿಜ್ಞಾನಿಗಳ ಆಗ್ರಹ: ಬೂಸ್ಟರ್‌ ಡೋಸ್‌ಗೂ ಮುನ್ನ, ದೇಶದ ಅಧಿಕ ಸಂಖ್ಯೆಯ ಜನರು ಇನ್ನೂ ಲಸಿಕೆ ಹಾಕಿಸಿಕೊಳ್ಳುವುದು ಬಾಕಿಯಿದ್ದು, ಅವರೆಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಲು ಸರ್ಕಾರ ಆದ್ಯತೆ ನೀಡಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಿಮಾಚಲ: ಶೇ 100ರಷ್ಟು ಲಸಿಕೆ ಸಾಧನೆ

ಶಿಮ್ಲಾ (ಪಿಟಿಐ): ರಾಜ್ಯದ ಎಲ್ಲ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ.

ರಾಜ್ಯದಲ್ಲಿನ ಅರ್ಹ ಶೇ 100ರಷ್ಟು ಜನರನ್ನು ಲಸಿಕಾ ಕಾರ್ಯಕ್ರಮಕ್ಕೆ ಒಳಪಡಿಸಲಾಗಿದೆ. 53.86 ಲಕ್ಷ ವಯಸ್ಕರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಆಗಸ್ಟ್ ಕೊನೆಯ ಹೊತ್ತಿಗೆ ರಾಜ್ಯದ ಶೇ 100ರಷ್ಟು ಅರ್ಹರಿಗೆ ಮೊದಲ ಡೋಸ್ ಪೂರ್ಣಗೊಳಿಸಿದ ಮೊದಲ ರಾಜ್ಯ ಎಂಬ ಶ್ರೇಯವೂ ಹಿಮಾಚಲ ಪ್ರದೇಶಕ್ಕೆ ಸಂದಿತ್ತು.

*ಓಮಿಕ್ರಾನ್ ಪತ್ತೆಯಾಗಿರುವ ಆಫ್ರಿಕಾದ ದೇಶಗಳಿಂದ ಬರುವವರಿಗೆ ಎಲ್ಲರಿಗೂ 7 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ ಎಂದು ಘೋಷಿಸಿದ ಮುಂಬೈ ಮಹಾನಗರ ಪಾಲಿಕೆ

*ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಒಂದು ವಾರ ಮುಂದೂಡಿಕೆ

*ಇಂಗ್ಲೆಂಡ್‌ನಲ್ಲಿ ಓಮೈಕ್ರಾನ್‌ನ ಸೋಂಕಿತರ ಸಂಖ್ಯೆ 75 ದಾಟಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT