ಸರ್ಕಾರಿ, ಖಾಸಗಿ ಕಚೇರಿಗಳಲ್ಲೇ ಕೋವಿಡ್ ಲಸಿಕೆ ಕೇಂದ್ರ: ಏಪ್ರಿಲ್ 11ರಿಂದ ಆರಂಭ

ನವದೆಹಲಿ: ದೇಶದಲ್ಲಿ ಕೋವಿಡ್–19 ಲಸಿಕೆ ಹಾಕುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಚೇರಿಗಳಲ್ಲೇ ಲಸಿಕೆ ಹಾಕುವ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿರುವ ಕನಿಷ್ಠ 100 ಜನರು ಇರುವ ಸಂಸ್ಥೆಗಳಲ್ಲಿ ಏಪ್ರಿಲ್ 11ರಿಂದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಕಚೇರಿಗಳಲ್ಲಿ (ಸರ್ಕಾರಿ ಮತ್ತು ಖಾಸಗಿ) ಲಸಿಕೆ ಹಾಕುವ ವ್ಯವಸ್ಥೆ ಕಲ್ಪಿಸುವ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ರವಾನಿಸಿದ್ದಾರೆ. ಕಚೇರಿಗಳು ಅಥವಾ ತಯಾರಿಕೆ ಮತ್ತು ಸೇವಾ ವಲಯ ಸಂಸ್ಥೆಗಳಲ್ಲಿ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಸಿಬ್ಬಂದಿಗೆ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ.
ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಳ್ಳುವ ಅವಕಾಶ ಸೃಷ್ಟಿಸಲು, ಅವರು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ (ಖಾಸಗಿ ಮತ್ತು ಸಾರ್ವಜನಿಕ ವಲಯ) ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿರುವ 100 ಜನರು ಇರುವ ಸ್ಥಳಗಳಲ್ಲಿ ಕೋವಿಡ್ ಲಸಿಕೆ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ರಾಜೇಶ್ ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Covid-19 karnataka Update:ರಾಜ್ಯದಲ್ಲಿ 7,000 ಸಮೀಪ ತಲುಪಿದ ಸೋಂಕು ಪ್ರಕರಣ
ಕೆಲಸದ ಸ್ಥಳದಲ್ಲಿಯೇ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರಗಳು ಕಚೇರಿ, ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುವಂತೆ ಹೇಳಿದ್ದಾರೆ. ಅಂಥ ಸ್ಥಳಗಳಲ್ಲಿ ಏಪ್ರಿಲ್ 11ರಿಂದ ಲಸಿಕೆ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.'
ಕೇಂದ್ರದ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ.
I welcome Union Government's decision to allow Covid-19 vaccination at workplaces which have atleast 100 beneficiaries. This will help to achieve wider and faster coverage of vaccine. I appeal to all employers and employees to ensure vaccination of all eligible.@narendramodi
— B.S. Yediyurappa (@BSYBJP) April 7, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.