ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಅಲಹಾಬಾದ್ ಹೈಕೋರ್ಟ್

ಜೀವಿಸುವ ಹಕ್ಕು ಕೊಲ್ಲುವ ಹಕ್ಕನ್ನು ಮೀರಿದ್ದು ಎಂದ ಕೋರ್ಟ್‌
Last Updated 2 ಸೆಪ್ಟೆಂಬರ್ 2021, 1:40 IST
ಅಕ್ಷರ ಗಾತ್ರ

ಅಲಹಾಬಾದ್: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಹಾಗೂ ಗೋ ಹತ್ಯೆ ಮಾಡುವವರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಸಂಸತ್ತು ಕಾನೂನು ರೂಪಿಸಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ಬುಧವಾರ ಸೂಚಿಸಿದೆ.

ಗೋವು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಎಂದು ಹೇಳಿರುವ ಹೈಕೋರ್ಟ್‌, ಮೂಲಭೂತ ಹಕ್ಕು ಗೋಮಾಂಸ ತಿನ್ನುವವರಿಗಷ್ಟೇ ಅಲ್ಲದೆ, ಗೋವುಗಳನ್ನು ಪೂಜಿಸುವ ಮತ್ತು ಅದರ ಮೇಲೆಯೇ ಆರ್ಥಿಕವಾಗಿ ಅವಲಂಬಿಸಿರುವವರಿಗೂ ಇದೆ ಎಂದು ತಿಳಿಸಿದೆ.

‘ಜೀವಿಸುವ ಹಕ್ಕು ಕೊಲ್ಲುವ ಹಕ್ಕನ್ನು ಮೀರಿದ್ದು ಮತ್ತು ಗೋಮಾಂಸ ತಿನ್ನುವ ಹಕ್ಕನ್ನು ಎಂದಿಗೂ ಮೂಲಭೂತ ಹಕ್ಕಾಗಿ ಪರಿಗಣಿಸಲಾಗದು’ ಎಂದು ಕೋರ್ಟ್‌ ಹೇಳಿದೆ. ಈ ಮೂಲಕ ನ್ಯಾಯಾಲಯವು ಸಾಂಬಲ್‌ ಜಿಲ್ಲೆಯ ಜಾವೇದ್‌ಗೆ ಜಾಮೀನು ನಿರಾಕರಿಸಿದೆ. ಗೋವನ್ನು ಕದ್ದು, ಕೊಂದ ಆರೋಪ ಜಾವೇದ್‌ ಮೇಲಿದೆ.

‘ಇದು ಅರ್ಜಿದಾರರ ಮೊದಲ ಅಪರಾಧವಲ್ಲ. ಈ ಅಪರಾಧಕ್ಕೂ ಮುನ್ನ, ಅವರು ಗೋ ಹತ್ಯೆಯನ್ನು ಮಾಡಿದ್ದಾರೆ. ಇದು ಸಮಾಜದಲ್ಲಿ ಸಾಮರಸ್ಯವನ್ನು ಕದಡಿದೆ’ ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಮತ್ತೆ ಅದೇ ಅಪರಾಧ ಎಸಗುತ್ತಾರೆ ಎಂದೂ ಅದು ತಿಳಿಸಿದೆ.

ಗೋವಿನ ಮಹತ್ವವನ್ನು ಹಿಂದೂಗಳಂತೆಯೇ ಮುಸ್ಲಿಂ ಆಡಳಿತಗಾರರು ಅರ್ಥ ಮಾಡಿ ಕೊಂಡಿದ್ದರು. ಗೋವನ್ನು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗ ಎಂದು ಅವರೂ ಪರಿಗಣಿಸಿದ್ದರು. ಉದಾಹರಣೆಗೆ ಬಾಬರ್, ಹುಮಾಯೂನ್ ಮತ್ತು ಅಕ್ಬರ್ ತಮ್ಮ ಧಾರ್ಮಿಕ ಹಬ್ಬಗಳಲ್ಲಿ ಗೋವುಗಳ ಬಲಿ ನಿಷೇಧಿಸಿದ್ದರು ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ಮೈಸೂರಿನ ಆಡಳಿತಗಾರ ಹೈದರ್ ಅಲಿ ಆಡಳಿತಾವಧಿಯಲ್ಲಿ ಕೂಡ ಗೋಹತ್ಯೆ ಶಿಕ್ಷಾರ್ಹ ಅಪರಾಧವಾಗಿತ್ತು ಎಂದು ಹೈಕೋರ್ಟ್ ಹೇಳಿದೆ.

ಒಂದು ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆಯುಂಟಾದರೆ ದೇಶವು ದುರ್ಬಲವಾಗುತ್ತದೆ. ಆದ್ದರಿಂದ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಗೋ ರಕ್ಷಣೆಯ ಹೆಸರಿನಲ್ಲಿ ಗೋವುಗಳಿಗೆ ಆಶ್ರಯ ಕಲ್ಪಿಸಿ ಹಣಗಳಿಕೆಯಲ್ಲಿ ತೊಡಗಿರುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸರ್ಕಾರ ಕಾನೂನುಗಳನ್ನು ತರಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT