ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ತುರ್ತು ಸಂಗ್ರಹಾಗಾರ ಬೇಕು: ಎನ್‌ಟಿಎಫ್‌ ಶಿಫಾರಸು

ಸುಪ್ರೀಂ ಕೋರ್ಟ್‌ ನೇಮಿಸಿದ್ದ ರಾಷ್ಟ್ರೀಯ ಕಾರ್ಯಪಡೆ ಶಿಫಾರಸು l ಆಮ್ಲಜನಕ ಹಂಚಿಕೆ ಸೂತ್ರ ಪ್ರಕಟ
Last Updated 25 ಜೂನ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ 2-3 ವಾರಗಳಿಗೆ ಆಗುವಷ್ಟು ಆಮ್ಲಜನಕ ಸಂಗ್ರಹ ಸಾಮರ್ಥ್ಯವಿರುವ ಸಂಗ್ರಹಾಗಾರಗಳನ್ನು ಸ್ಥಾಪಿಸಬೇಕು. ತುರ್ತು ಬಳಕೆಗೆ ಇಂಧನ ಸಂಗ್ರಹಾಗಾರಗಳನ್ನು ಸ್ಥಾಪಿಸಿರುವಂತೆಯೇ, ಆಮ್ಲಜನಕದ ಸಂಗ್ರಹಾಗಾರಗಳನ್ನು ಸ್ಥಾಪಿಸಬೇಕು’ ಎಂದು ಆಮ್ಲಜನಕ ಹಂಚಿಕೆ ಸೂತ್ರವನ್ನು ನಿಗದಿ ಮಾಡಲು ಸುಪ್ರೀಂ ಕೋರ್ಟ್‌ ರಚಿಸಿದ್ದ ರಾಷ್ಟ್ರೀಯ ಕಾರ್ಯ ಪಡೆ (ಎನ್‌ಟಿಎಫ್‌) ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್‌ಗೆಎನ್‌ಟಿಎಫ್‌ ಸಲ್ಲಿಸಿರುವ ವರದಿಯಲ್ಲಿ ಈ ಶಿಫಾರಸು ಇದೆ. ಅಲ್ಲದೆ, ಆಮ್ಲಜನಕದ ಅಗತ್ಯವನ್ನು ಹೇಗೆ ಲೆಕ್ಕಹಾಕಬೇಕು ಮತ್ತು ಹೇಗೆ ಹಂಚಿಕೆ ಮಾಡಬೇಕು ಎಂಬುದನ್ನೂ ಎನ್‌ಟಿಎಫ್‌ ಸೂಚಿಸಿದೆ. ‘100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಶೇ 25ರಷ್ಟು ತುರ್ತು ಚಿಕಿತ್ಸಾ ಘಟಕ (ಐಸಿಯು) ಹಾಸಿಗೆಗಳು ಇದ್ದರೆ, ಪ್ರತಿದಿನ ಆ ಆಸ್ಪತ್ರೆಗೆ 1.5 ಟನ್ ಆಮ್ಲಜನಕ ಬೇಕಾಗುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ಈ ಸೂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು’ ಎಂದು ಎನ್‌ಟಿಎಫ್
ಹೇಳಿದೆ.

‘ತಮಗೆ ಹಂಚಿಕೆಯಾದ ಆಮ್ಲಜನಕವನ್ನು ಅದೇ ದಿನ ಸಂಜೆ 4ರ ಒಳಗೆ ರಾಜ್ಯ ಸರ್ಕಾರಗಳು ಪಡೆದುಕೊಳ್ಳದೇ ಇದ್ದರೆ, ಉಳಿದಿರುವ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಬೇಕು’ ಎಂದು ಎನ್‌ಟಿಎಫ್ ಶಿಫಾರಸು
ಮಾಡಿದೆ.

‘ತುರ್ತು ಸಂದರ್ಭಗಳಲ್ಲಿ ಆಮ್ಲಜನಕದ ಅವಶ್ಯಕತೆ ಅಧಿಕವಾಗಿದ್ದರೆ, ಈ ಸೂತ್ರವನ್ನು ಬದಲಿಸಿಕೊಳ್ಳಬಹುದು. ಇದಕ್ಕಾಗಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ, ಆಮ್ಲಜನಕದ ಅವಶ್ಯಕತೆ ಇರುವ ರೋಗಿಗಳ ಸಂಖ್ಯೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ದುಪ್ಪಟ್ಟಾಗುವ ಅವಧಿಯನ್ನು ಪರಿಗಣಿಸಿ ಈ ಸೂತ್ರವನ್ನು ಬದಲಿಸಿಕೊಳ್ಳಬೇಕು’ ಎಂದು ಎನ್‌ಟಿಎಫ್ ಹೇಳಿದೆ.

ಕೋವಿಡ್‌ನಂತಹ ಸಾಂಕ್ರಾಮಿಕಗಳು ಮತ್ತೆ ಬಂದರೆ, ಅದನ್ನು ಎದುರಿಸಲು ಅಗತ್ಯವಿರುವಷ್ಟು ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಎನ್‌ಟಿಎಫ್ ಹೇಳಿದೆ.ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿನ ಆಸ್ಪತ್ರೆಗಳು ತಮ್ಮದೇ ಪ್ರತ್ಯೇಕ ಅನಿಲ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಂದಿರಬೇಕು. ತುರ್ತು ಸಂದರ್ಭದಲ್ಲಿ ಅಗತ್ಯವಿರುವಷ್ಟು ಅನಿಲ ಆಮ್ಲಜನಕವನ್ನು ಈ ಘಟಕಗಳ ಮೂಲಕ ಪಡೆದುಕೊಳ್ಳಬಹುದು. ಈ ಕೆಲಸ ತುರ್ತಾಗಿ ಆಗಬೇಕುಎಂದು ಎನ್‌ಟಿಎಫ್ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಆಮ್ಲಜನಕ ಉತ್ಪಾದನೆ, ಹಂಚಿಕೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಏನು ಮಾಡಬೇಕು ಎಂಬುದನ್ನು ಎನ್‌ಟಿಎಫ್ ಶಿಫಾರಸು ಮಾಡಿದೆ.

ಆಸ್ಪತ್ರೆಗಳು

*ಆಸ್ಪತ್ರೆಗಳು ಸದಾ 6 ಸಿಲಿಂಡರ್‌ಗಳ ಹೆಚ್ಚುವರಿ ಆಮ್ಲಜನಕ ಸಂಗ್ರಹವನ್ನು ಹೊಂದಿರಬೇಕು

*ಮುಂದಿನ 24 ಗಂಟೆಗಳಲ್ಲಿ ಎಷ್ಟು ಆಮ್ಲಜನಕ ಬೇಕಾಗಬಹುದು ಎಂಬುದನ್ನು ಲೆಕ್ಕಹಾಕಬೇಕು

*ಆಮ್ಲಜನಕ ಬಳಕೆ ಲೆಕ್ಕಪರಿಶೋಧನೆ ನಡೆಸಬೇಕು

ರಾಜ್ಯ ಸರ್ಕಾರ

*ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿನ ಐಸಿಯು ಹಾಸಿಗೆಗಳು, ಆಮ್ಲಜನಕ ಅವಶ್ಯಕತೆ ಇರುವ ರೋಗಿಗಳ ಸಂಖ್ಯೆಯ ವಿವರ ಇರುವ ಡ್ಯಾಶ್‌ಬೋರ್ಡ್‌ ನಿರ್ವಹಣೆ ಮಾಡಬೇಕು

*ರಾಜ್ಯದ ಆಸ್ಪತ್ರೆಗಳಲ್ಲಿನ ಆಮ್ಲಜನಕ ಬಳಕೆಯ ಲೆಕ್ಕಪರಿಶೋಧನೆ ನಡೆಸಬೇಕು. ಆಸ್ಪತ್ರೆಗಳಲ್ಲಿನ ಸಂಗ್ರಹಾಗಾರಗಳು, ಸಿಲಿಂಡರ್‌ಗಳು, ಕೊಳವೆ ಮಾರ್ಗಗಳು, ಅನಿಲ ಆಮ್ಲಜನಕ ಉತ್ಪಾದನಾ ಘಟಕಗಳು, ಆಮ್ಲಜನಕ ಸಾಂದ್ರಕಗಳ ವಿವರವನ್ನು ಸಂಗ್ರಹಿಸಬೇಕು

*ರಾಜ್ಯದಲ್ಲಿನ ಆಮ್ಲಜನಕ ಟ್ಯಾಂಕರ್‌ಗಳ ಮೇಲೆ ನಿಗಾ ಇರಿಸಬೇಕು. ಆಮ್ಲಜನಕ ಅಗತ್ಯವಿರುವ ಆಸ್ಪತ್ರೆಗಳು ತುರ್ತು ಕರೆ ನೀಡುವ ವ್ಯವಸ್ಥೆ ಮತ್ತು ವಾರ್‌ ರೂಂ ರಚಿಸಬೇಕು

*ನಿಗದಿ ಮಾಡಿದ ಸೂತ್ರದ ಅನ್ವಯ ರಾಜ್ಯಕ್ಕೆ ಅಗತ್ಯವಿರುವ ಆಮ್ಲಜನಕದ ಪ್ರಮಾಣವನ್ನು ಲೆಕ್ಕ ಹಾಕಬೇಕು

ಕೇಂದ್ರ ಸರ್ಕಾರ

*ಆಮ್ಲಜನಕ ಸಿಲಿಂಡರ್‌ಗಳ ತಯಾರಿಕೆ, ಆಮ್ಲಜನಕ ಉತ್ಪಾದನೆ ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ ನೀಡಬೇಕು

*ರಾಜ್ಯಗಳಲ್ಲಿನ ಆಸ್ಪತ್ರೆಗಳ ಹಾಸಿಗೆಗಳು, ಐಸಿಯು ಹಾಸಿಗೆಗಳು, ಆಮ್ಲಜನಕ ಅಗತ್ಯವಿರುವ ರೋಗಿಗಳ ಸಂಖ್ಯೆಯ ವಿವರವನ್ನು ಪರಿಶೀಲಿಸಬೇಕು

*ನಿಗದಿ ಮಾಡಲಾದ ಸೂತ್ರದ ಅನ್ವಯ ರಾಜ್ಯಗಳಿಗೆ ಆಮ್ಲಜನಕವನ್ನು ಹಂಚಿಕೆ ಮಾಡಬೇಕು

*ಹಂಚಿಕೆ ಮಾಡಲಾದ ಆಮ್ಲಜನಕವನ್ನು ಪೂರೈಸುವ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು. ಅಗತ್ಯವಿದ್ದರೆ ಆಮ್ಲಜನಕದ ಟ್ಯಾಂಕರ್‌ಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT