ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌ ಚೌರಾಸಿಯಾ ಸಾವು: ಬಿಜೆಪಿ–ಟಿಎಂಸಿ ಜಟಾಪಟಿ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ರಾಜಕೀಯ ಹತ್ಯೆ: ಶಾ ಆರೋಪ
Last Updated 6 ಮೇ 2022, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ಇಲ್ಲಿನ ಕಾಶಿಪುರ ಎಂಬಲ್ಲಿಯ ಅರ್ಜುನ್‌ ಚೌರಾಸಿಯಾ ಎಂಬವರ ದೇಹವು ಅವರ ಮನೆಯ ಬಳಿ ಇದ್ದ ಪಾಳುಬಿದ್ದ ಕಟ್ಟಡದಲ್ಲಿ ನೇಣುಹಾಕಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಸ್ಥಳೀಯ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆದರೆ, ಇದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.

ಬಿಜೆಪಿ ನಾಯಕರು ಮಾಧ್ಯಮಗೋಷ್ಠಿ ನಡೆಸಿ, ತಮ್ಮ ಪಕ್ಷದ ಕಾರ್ಯಕರ್ತನ ಹತ್ಯೆ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ ‘ಅರ್ಜುನ್‌ ನಮ್ಮ ಪಕ್ಷದ ಕಾರ್ಯಕರ್ತ’ ಎಂದು ಟಿಎಂಸಿ ಪ್ರತಿಪಾದಿಸಿದೆ.

‘ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಹತ್ಯೆ ಆಗಿದೆ. ಟಿಎಂಸಿ ಕಾರ್ಯಕರ್ತರೇ ಈ ಹತ್ಯೆ ನಡೆಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಕಲ್ಕತ್ತ ಹೈಕೋರ್ಟ್‌ಗೆ ಬಿಜೆಪಿ ಅರ್ಜಿ ಸಲ್ಲಿಸಿದೆ. ‘ಸೇನಾ ಕಮಾಂಡ್‌ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಯಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಪಶ್ಚಿಮ ಬಂಗಾಳದಲ್ಲಿ ಇದ್ದರು. ಅವರು ಕೋಲ್ಕತ್ತಕ್ಕೆ ಶುಕ್ರವಾರ ಭೇಟಿ ನೀಡಬೇಕಿತ್ತು. ನಂತರ ರ‍್ಯಾಲಿ ಮತ್ತು ಸಭೆಗಳನ್ನು ನಡೆಸಬೇಕಿತ್ತು. ಆದರೆ ಅವರು ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಅರ್ಜುನ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅದಕ್ಕೂ ಮುನ್ನವೇ, ಟಿಎಂಸಿ ಶಾಸಕ ಅತಿನ್ ಘೋಷ್ ಅವರು ಅರ್ಜುನ್ ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ.

‘ಕೇಂದ್ರ ಗೃಹ ಸಚಿವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಬೈಕ್‌ ರ‍್ಯಾಲಿ ಹಮ್ಮಿಕೊಂಡಿದ್ದೆವು. ಆ ರ‍್ಯಾಲಿಯನ್ನು ಅರ್ಜುನ್ ಚೌರಾಸಿಯಾ ಮುನ್ನಡೆಸಬೇಕಿತ್ತು. ನಮ್ಮ ಕಾರ್ಯಕರ್ತನ ಹತ್ಯೆ ನಡೆದಿರುವ ಕಾರಣ, ಎಲ್ಲಾ ಸ್ವಾಗತ ಕಾರ್ಯಕ್ರಮಗಳನ್ನು ರದ್ದುಮಾಡುವಂತೆ ಸಚಿವರು ಸೂಚಿಸಿದ್ದಾರೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಹೇಳಿದೆ.

‘ಸತ್ತವ ನಮ್ಮ ಪಕ್ಷದವ’– ಟಿಎಂಸಿ:ಅಸಹಜವಾಗಿ ಮೃತಪಟ್ಟಿರುವ ಅರ್ಜುನ್ ಚೌರಾಸಿಯಾ ಅವರು ನಮ್ಮ ಪಕ್ಷದ ಕಾರ್ಯಕರ್ತ. ಆದರೆ ಅವರು ತಮ್ಮ ಪಕ್ಷದವರು ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಟಿಎಂಸಿ ಶಾಸಕ ಅತಿನ್ ಘೋಷ್ ಹೇಳಿದ್ದಾರೆ.

‘ಈಚೆಗೆ ನಡೆದಿದ್ದ ಕೋಲ್ಕತ್ತ ನಗರಸಭೆ ಚುನಾವಣೆಯಲ್ಲಿ ಚೌರಾಸಿಯ ನಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು. ಇದರಿಂದ ಅವರು ಬಿಜೆಪಿ ಕಾರ್ಯಕರ್ತರ ದ್ವೇಷ ಕಟ್ಟುಕೊಂಡಿದ್ದರು’ ಎಂದು ಅತಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT