ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಎಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ತರೂರ್‌ಗೆ ಕಾಂಗ್ರೆಸ್ ಸೂಚನೆ

Last Updated 21 ಮಾರ್ಚ್ 2022, 13:53 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ‘ಜಿ 23’ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಂಸದ ಶಶಿ ತರೂರ್ ಅವರಿಗೆ ಕೇರಳದಲ್ಲಿ ಸಿಪಿಎಂ ಪಕ್ಷವು ಆಯೋಜಿಸಿರುವ ವಿಚಾರ ಸಂಕಿರಣಗಳಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದು, ಕೇರಳ ಕಾಂಗ್ರೆಸ್ ಅಧ್ಯಕ್ಷರ ಸೂಚನೆಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ತಿರುವನಂತಪುರದ ಸಂಸದ ಶಶಿ ತರೂರ್ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ವಿ. ಥಾಮಸ್ ಅವರನ್ನು ಸಿಪಿಎಂ ತನ್ನ ವಿಚಾರಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದೆ.

ಆದರೆ, ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಅವರು ತಮ್ಮ ಪಕ್ಷದ ಮುಖಂಡರು ಇಂಥ ಕಾರ್ಯಕ್ರಮಗಳಿಂದ ದೂರವಿರಬೇಕು ಎಂದು ತರೂರ್ ಮತ್ತು ಥಾಮಸ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಆದರೆ, ಈ ನಿರ್ದೇಶನವನ್ನು ವಿರೋಧಿಸಿ ತರೂರ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಸೋನಿಯಾ ಅವರ ಭೇಟಿಯ ಸಂದರ್ಭದಲ್ಲಿ ‘ನಾನು ಸಿಪಿಎಂ ಅನ್ನು ಹೊಗಳಲು ವಿಚಾರಸಂಕಿರಣಗಳಲ್ಲಿ ಭಾಗವಹಿಸುತ್ತಿಲ್ಲ’ ಎಂದು ತಿಳಿಸಿದ ತರೂರ್, ‘ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಈ ರೀತಿಯ ಸಂವಾದಗಳು ಅಗತ್ಯ’ ಎಂದು ಪ್ರತಿಪಾದಿಸಿದರು. ಆದರೆ, ಇದಕ್ಕೆ ಒಪ್ಪದ ಸೋನಿಯಾ ಕೇರಳ ರಾಜ್ಯ ಕಾಂಗ್ರೆಸ್‌ನ ನಾಯಕತ್ವದ ನಿರ್ಧಾರದಂತೆ ನಡೆದುಕೊಳ್ಳುವಂತೆ ತರೂರ್ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳ ಕಾಂಗ್ರೆಸ್‌ನ ಮುಖಂಡರುಸೋಮವಾರ ಸೋನಿಯಾ ಅವರನ್ನು ಭೇಟಿಯಾಗಿ ತಮ್ಮ ಪಕ್ಷದ ಮುಖಂಡರು ಸಿಪಿಎಂನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಈ ಬಗ್ಗೆ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಲ್ಲ ಮೂಲಗಳ ಪ್ರಕಾರ, ಸೋನಿಯಾ ಭೇಟಿಯ ವೇಳೆ ಕೇರಳ ಕಾಂಗ್ರೆಸ್ ಮುಖಂಡರು, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ಕೆ –ರೈಲ್ ಯೋಜನೆ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡುತ್ತಿದ್ದು, ಇದೀಗ ಅದೇ ಪಕ್ಷದ (ಸಿಪಿಎಂ) ವೇದಿಕೆಯಲ್ಲಿ ತರೂರ್ ಅವರ ಉಪಸ್ಥಿತಿಯು ಮುಜುಗರವನ್ನುಂಟು ಮಾಡಲಿದೆ ಎಂದು ಚರ್ಚಿಸಿದ್ದಾರೆ ಎನ್ನಲಾಗಿದೆ.

‘ಈ ಹಿಂದೆ ಸಿಪಿಎಂನ ರಾಜ್ಯ ಸಮಾವೇಶದ ವೇಳೆ ಆ ಪಕ್ಷವು ‘ಕಾಂಗ್ರೆಸ್ ಮುಕ್ತ ಕೇರಳ’ ಎನ್ನುವ ಘೋಷಣೆ ಹೊರಡಿಸಿ, ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಿಸಿತ್ತು. ಸಿಪಿಎಂನ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಪಾಲ್ಗೊಂಡರೆ ಪಕ್ಷದ ಕಾರ್ಯಕರ್ತರ ಮನೋಸ್ಥೈರ್ಯ ಕುಗ್ಗಲಿದೆ’ ಎಂದೂ ಕಾಂಗ್ರೆಸ್ ಸಂಸದರು ಸೋನಿಯಾ ಜತೆ ನಡೆದ ಸಭೆಯಲ್ಲಿ ಗಮನ ಸೆಳೆದಿದ್ದಾರೆ.

ಈ ನಡುವೆ ತರೂರ್ ಭಾಗವಹಿಸುವಿಕೆಯ ಕುರಿತು ಪ್ರತಿಕ್ರಿಯಿಸಿರುವ ಸಿಪಿಎಂ‌ನ ರಾಜ್ಯಸಭಾ ಸಂಸದ ಜಾನ್ ಬಿರ್ಟಾಸ್ ಅವರು, ‘ನಮ್ಮ ಪಕ್ಷವು ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಮಹತ್ವದ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ. ಕೇಂದ್ರ- ರಾಜ್ಯ ಸಂಬಂಧದ ವಿಷಯಗಳಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂದಿಗ್ಧ ಕಾರಣಗಳಿಂದಾಗಿ ತರೂರ್ ಅವರಂತಹ ರಾಷ್ಟ್ರೀಯ ನಾಯಕರನ್ನು ಕಾಂಗ್ರೆಸ್‌ನ ಪ್ರಾದೇಶಿಕ ನಾಯಕತ್ವ ತಡೆಯುವಲ್ಲಿ ಬಿಜೆಪಿಯ ಕೈವಾಡವಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT