ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಕೋವಿಡ್‌–19 ಲಸಿಕೆ: ಇಂಟರ್‌ಪೋಲ್‌ ಎಚ್ಚರಿಕೆ

Last Updated 3 ಡಿಸೆಂಬರ್ 2020, 21:20 IST
ಅಕ್ಷರ ಗಾತ್ರ

ನವದೆಹಲಿ: ಜಾಹೀರಾತು ನೀಡಿ ನಕಲಿ ಕೋವಿಡ್‌–19 ಲಸಿಕೆಗಳನ್ನು ವ್ಯವಸ್ಥಿತ ಕ್ರಿಮಿನಲ್‌ ಜಾಲಗಳು ಆನ್‌ಲೈನ್‌ ಮುಖಾಂತರ ಅಥವಾ ಭೌತಿಕವಾಗಿ ಜನರಿಗೆ ಮಾರಾಟ ಮಾಡುವ ಸಾಧ್ಯತೆಗಳಿವೆ ಎಂದು ಇಂಟರ್‌ಪೋಲ್‌ ಎಚ್ಚರಿಕೆ ನೀಡಿದೆ.

ಈ ಬಗ್ಗೆ ವಿಶ್ವದಾದ್ಯಂತ ಇರುವ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳಿಗೆ ಇಂಟರ್‌ಪೋಲ್‌ ಮಾಹಿತಿ ರವಾನಿಸಿದೆ.

ತನ್ನೆಲ್ಲಾ 194 ಸದಸ್ಯ ರಾಷ್ಟ್ರಗಳಿಗೆ ಬುಧವಾರ ಆರೆಂಜ್‌ ನೋಟಿಸ್‌ ಜಾರಿ ಮಾಡಿರುವ ಇಂಟರ್‌ಪೋಲ್‌, ‘ಕೋವಿಡ್‌–19 ಹಾಗೂ ಶೀತಜ್ವರಕ್ಕೆ ಇರುವ ಲಸಿಕೆಗಳ ಅಕ್ರಮ ಜಾಹೀರಾತು, ಲಸಿಕೆಗಳ ಕಳ್ಳತನ ಹಾಗೂ ನಕಲಿ ಲಸಿಕೆಗಳ ತಯಾರಿಯಂಥ ಅಪರಾಧಿ ಚಟುವಟಿಕೆಗಳ ಮೇಲೆ ನಿಗಾ ಇರಿಸಿ’ ಎಂದು ಎಚ್ಚರಿಸಿದೆ.

ಕೋವಿಡ್‌–19 ಲಸಿಕೆಯ ಬಳಕೆಗೆ ಬ್ರಿಟನ್‌ ಅನುಮೋದನೆ ನೀಡಿದ ದಿನವೇ ಇಂಟರ್‌ಪೋಲ್‌ನಿಂದ ಈ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಇಂಟರ್‌ಪೋಲ್‌ ಜೊತೆ ಸಮನ್ವಯದಿಂದ ಕೆಲಸ ಮಾಡುವ ಹೊಣೆಯನ್ನು ಸಿಬಿಐಗೆ ನೀಡಲಾಗಿದೆ.

‘ಲಸಿಕೆ ಸರಬರಾಜು ಸಂದರ್ಭದಲ್ಲಿ ಹೆಚ್ಚಿನ ಭದ್ರತೆಯನ್ನು ನೀಡುವುದಕ್ಕೆ ಆದ್ಯತೆ ನೀಡಬೇಕು. ನಕಲಿ ಲಸಿಕೆಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗಳ ಮೇಲೂ ನಿಗಾ ವಹಿಸುವುದು ಮುಖ್ಯ. ಲಸಿಕೆಗಳ ಮೇಲೆ ಸಂಶಯಪಡದ ಜನರನ್ನು ಕ್ರಿಮಿನಲ್‌ ಜಾಲಗಳು ಗುರಿ ಮಾಡಲಿವೆ. ಲಸಿಕೆ ಪಡೆದರೆ ಸೋಂಕು ಬರುವುದಿಲ್ಲ ಎನ್ನುವ ಭರವಸೆ ಹುಟ್ಟಿಸಿ, ನಕಲಿ ವೆಬ್‌ಸೈಟ್‌ಗಳ ಮುಖಾಂತರ ಇದರ ಪ್ರಚಾರ ಮಾಡುತ್ತಾರೆ. ಇದು ಜನರ ಆರೋಗ್ಯಕ್ಕೆ, ಜೀವಕ್ಕೇ ಕುತ್ತುತರಬಹುದು’ ಎಂದು ಪೊಲೀಸ್‌ ಸಂಸ್ಥೆಗಳಿಗೆ ಇಂಟರ್‌ಪೋಲ್‌ ಪ್ರಧಾನ ಕಾರ್ಯದರ್ಶಿ ಯಾರ್ಗನ್‌ ಸ್ಟಾಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ ಮುಖಾಂತರ ಔಷಧಿಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗಳ ಪೈಕಿ ಅಕ್ರಮವಾಗಿ ಔಷಧಿಗಳನ್ನು, ವೈದ್ಯಕೀಯ ಉಪಕರಣಗಳನ್ನು ಮಾರಾಟ ಮಾಡುವ 3 ಸಾವಿರ ವೆಬ್‌ಸೈಟ್‌ಗಳನ್ನು ಇಂಟರ್‌ಪೋಲ್‌ ಸೈಬರ್‌ ಅಪರಾಧ ವಿಭಾಗವು ಪರಿಶೀಲಿಸಿದೆ. ಈ ಪೈಕಿ 1,700 ವೆಬ್‌ಸೈಟ್‌ಗಳಿಂದ ಫಿಶಿಂಗ್‌, ಸ್ಪ್ಯಾಮಿಂಗ್‌ ರೀತಿಯ ಸೈಬರ್‌ ದಾಳಿ ಎದುರಾಗುವ ಅಪಾಯ ಕಂಡುಬಂದಿದೆ. ಇದರಿಂದಾಗಿ ಹಣಕಾಸು ಮತ್ತು ಆರೋಗ್ಯ ಎರಡರ ಮೇಲೂ ಅಪಾಯ ಉಂಟಾಗಬಹುದಾಗಿದೆ ಎಂದು ಇಂಟರ್‌ಪೋಲ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT