ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ಭಂಡಾರದಿಂದ ಕಳ್ಳತನ: ಮೇಲ್ವಿಚಾರಣೆಗೆ ಅಧಿಕಾರಿ ನೇಮಿಸಿ ಎಂದ ಹೈಕೋರ್ಟ್‌

ಕೇರಳ ಹೈಕೋರ್ಟ್ ಸೂಚನೆ
Last Updated 12 ಜನವರಿ 2022, 11:37 IST
ಅಕ್ಷರ ಗಾತ್ರ

ಕೊಚ್ಚಿ: ಕೇವಲ ಒಂದು ತಿಂಗಳ ಅಂತರದಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಂಡಾರದಲ್ಲಿ ಎರಡು ಕಳ್ಳತನ ನಡೆದಿರುವ ಪ್ರಕರಣಗಳು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಪರಾಧ ತಡೆಗೆ ಭಂಡಾರದ ಮೇಲ್ವಿಚಾರಣೆಗೆಒಬ್ಬ ಸಮರ್ಥ ಅಧಿಕಾರಿ ನೇಮಿಸಬೇಕು ಎಂದು ಕೇರಳ ಹೈಕೋರ್ಟ್‌ ಬುಧವಾರ ಹೇಳಿದೆ.

ಕಳೆದ ವರ್ಷದ ಡಿಸೆಂಬರ್‌ 16 ರಂದು ಶಬರಿಮಲೆ ಸನ್ನಿಧಾನದ ಭಂಡಾರದ ಎಣಿಕೆಯಲ್ಲಿ ತೊಡಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಉದ್ಯೋಗಿಯೊಬ್ಬರು ಹಣ ಕದಿಯುತ್ತಿರುವುದು ಪತ್ತೆಯಾಗಿತ್ತು. ಆತನ ಕೊಠಡಿಯನ್ನು ಶೋಧಿಸಿದಾಗ ₹ 42,470 ದೊರೆತಿತ್ತು.

ಅದೇ ರೀತಿ ಈ ವರ್ಷದ ಜನವರಿ 8 ರಂದು ಟಿಡಿಬಿಯ ಮತ್ತೊಬ್ಬ ಉದ್ಯೋಗಿ ಭಂಡಾರ ಎಣಿಸುತ್ತಿದ್ದಾಗ ₹3,500 ಕದ್ದು ಸಿಕ್ಕಿಬಿದ್ದಿದ್ದ.

‘ಟಿಡಿಬಿಯ ಉದ್ಯೋಗಿಗಳು ಶಬರಿಮಲೆ ಭಂಡಾರದ ನೋಟುಗಳು, ನಾಣ್ಯಗಳು, ಉಡುಗೊರೆಗಳು, ಇತ್ಯಾದಿ ವಸ್ತುಗಳನ್ನು ಎಣಿಸುವ ಸಂಪೂರ್ಣ ಚಟುವಟಿಕೆಯ ಮೇಲೆ ನಿರಂತರ ನಿಗಾ ವಹಿಸಬೇಕು’ ಎಂದು ಕಳೆದ ಡಿಸೆಂಬರ್‌ 21 ರಂದು ಹೈಕೋರ್ಟ್‌ ನಿರ್ದೇಶನದ ನಂತರವೂ ಎರಡನೇ ಬಾರಿ ಇಂತಹ ಘಟನೆ ನಡೆದಿದೆ.

‘ಕಳ್ಳತನದಂತಹ ಪ್ರಕರಣಗಳನ್ನು, ಅವರ ವಿರುದ್ಧ ಕೈಗೊಳ್ಳುವ ಕ್ರಮಗಳನ್ನೂ ಶಬರಿಮಲೆಯ ವಿಶೇಷ ಆಯುಕ್ತರ ಗಮನಕ್ಕೆ ತರಬೇಕು. ಅವರು ಸೂಕ್ತ ವರದಿ ತಯಾರಿಸಿ ನ್ಯಾಯಾಲಯದ ಗಮನಕ್ಕೆ ತರುತ್ತಾರೆ. ಅಂತಹ ಕೃತ್ಯ ಎಸಗುವ ಉದ್ಯೋಗಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಹೈಕೋರ್ಟ್‌ ತನ್ನ ಹಿಂದಿನ ಆದೇಶದಲ್ಲಿ ಹೇಳಿತ್ತು.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿಲ್‌ ಕೆ.ನರೇಂದ್ರನ್‌ ಮತ್ತು ಪಿ.ಜಿ.ಅಜಿತ್‌ ಕುಮಾರ್‌ ಅವರ ಪೀಠವೊಂದು ಡಿಸೆಂಬರ್‌ 21ರ ಆದೇಶವನ್ನು ಪುನರುಚ್ಚರಿಸಿತು. ‘ಭಂಡಾರದ ಮೇಲ್ವಿಚಾರಣೆಗೆ ಒಬ್ಬ ಸಮೃರ್ಥ ಅಧಿಕಾರಿಯನ್ನು ನೇಮಿಸಬೇಕು’ ಎಂದು ನಿರ್ದೇಶನ ನೀಡಿತು.

ಕಳ್ಳತನ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದು ಟಿಡಿಬಿಯ ಇಬ್ಬರು ಉದ್ಯೋಗಿಗಳೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT