ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಮಗನ ಬಟ್ಟೆ ಕಳಚಿ ಶೋಧ: ಸಂಸದ ವಹಾಬ್‌ ಆರೋಪ

ಕಸ್ಟಮ್ಸ್‌ ಅಧಿಕಾರಿಗಳ ಕ್ರಮದ ಬಗ್ಗೆ ಆಕ್ಷೇಪ
Last Updated 6 ನವೆಂಬರ್ 2022, 12:44 IST
ಅಕ್ಷರ ಗಾತ್ರ

ತಿರುವನಂತಪುರ: ‘ಯುಎಇಯಿಂದ ಇತ್ತೀಚಿಗೆ ಇಲ್ಲಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ನನ್ನ ಮಗನನ್ನು ತಡೆದ ಕಸ್ಟಮ್ಸ್‌ ಅಧಿಕಾರಿಗಳು, ಆತನ ಬಟ್ಟೆ ಕಳಚಿ, ಶೋಧ ನಡೆಸಿದ್ದಾರೆ’ ಎಂದು ಇಂಡಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ರಾಜ್ಯಸಭಾ ಸಂಸದ ಪಿ.ವಿ.ಅಬ್ದುಲ್‌ ವಹಾಬ್‌ ಆರೋಪಿಸಿದ್ದಾರೆ.

‘ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ಈ ವಿಷಯದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸಿದ್ದಾರೆ. ನನ್ನ ಮಗನನ್ನು ಅನಂತಪುರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಆತನ ಬಟ್ಟೆಗಳನ್ನು ಕಳಚಿದ್ದಾರೆ. ಪುನಃ ವಿಮಾನನಿಲ್ದಾಣಕ್ಕೆ ಕರೆದುಕೊಂಡು ಬರುವ ಮೊದಲು ಆತನನ್ನು ಎಕ್ಸ್‌ರೇ ಪರೀಕ್ಷೆಗೆ ಒಳಪಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನನಗಿರುವ ಮಾಹಿತಿಯಂತೆ, ಇಂಥ ತೀವ್ರಸ್ವರೂಪದ ಕ್ರಮ ಕೈಗೊಳ್ಳಬೇಕು ಎಂದಾದಲ್ಲಿ ಮ್ಯಾಜಿಸ್ಟ್ರೇಟ್‌ರ ಅನುಮೋದನೆ ಅಗತ್ಯ. ಕಸ್ಟಮ್ಸ್‌ ಅಧಿಕಾರಿಗಳು ತಾವಾಗಿಯೇ ಇಂಥ ಪರಿಶೀಲನೆ ನಡೆಸುವಂತಿಲ್ಲ. ಹಾಗೊಂದು ವೇಳೆ ಪರಿಶೀಲನೆ ನಡೆಸಿದರೆ, ಅದು ವ್ಯಕ್ತಿಯ ಖಾಸಗಿತನ ಹಕ್ಕಿನ ಉಲ್ಲಂಘನೆಯಾಗಲಿದೆ’ ಎಂದು ವಹಾಬ್‌ ಹೇಳಿದ್ದಾರೆ.

ಸಂಸದ ವಹಾಬ್‌ ಅವರ ಆರೋಪಗಳ ಬಗ್ಗೆ ಕಸ್ಟಮ್ಸ್‌ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಆದರೆ, ವಿಮಾನನಿಲ್ದಾಣದಲ್ಲಿನ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ ಎಂದಿದ್ದಾರೆ.

ವಿದೇಶಗಳಿಂದ ಭಾರಿ ಪ್ರಮಾಣದ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆಯನ್ನು ತೀವ್ರಗೊಳಿಸಿದ್ದಾರೆ ಎಂದೂ ಹೇಳಿದ್ದಾರೆ.

‘ಸಂಸದ ವಹಾಬ್‌ ಅವರ ಮಗನ ಬಟ್ಟೆಗಳನ್ನು ಕಳಚಿ ಶೋಧ ನಡೆಸಿಲ್ಲ. ಸಂಸದರ ಮಗನ ವಿರುದ್ಧ ಲುಕ್‌ ಔಟ್‌ ನೋಟಿಸ್‌ (ಎಲ್‌ಒಸಿ) ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಲಾಗಿದೆ’ ಎಂದು ಕಸ್ಟಮ್ಸ್‌ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ತಮ್ಮ ಮಗನ ವಿರುದ್ಧ ಲುಕ್‌ಔಟ್‌ ನೋಟಿಸ್‌ ಇತ್ತು ಎಂಬ ವರದಿಗಳನ್ನು ಸಂಸದ ವಹಾಬ್‌ ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT