ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ದತ್ತಾಂಶಗಳ ಕದ್ದು, ಮಾರುವ ಜಾಲ ಪತ್ತೆ

ಸೈಬರಾಬಾದ್‌ ಪೊಲೀಸರ ಮಹತ್ವದ ಕಾರ್ಯಾಚರಣೆ
Last Updated 23 ಮಾರ್ಚ್ 2023, 22:46 IST
ಅಕ್ಷರ ಗಾತ್ರ

ಹೈದರಾಬಾದ್‌: ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಸೂಕ್ಷ್ಮ, ಗೋಪ್ಯ ದತ್ತಾಂಶಗಳು ಹಾಗೂ 16.8 ಕೋಟಿ ಜನರ ವೈಯಕ್ತಿಕ ದತ್ತಾಂಶಗಳನ್ನು ಕದ್ದು ಮಾರುವವರ ಜಾಲವನ್ನು (ಗ್ಯಾಂಗ್‌) ಬೇಧಿಸಿರುವುದಾಗಿ ಸೈಬರಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಈ ಜಾಲದವರು ರಕ್ಷಣಾ ಸಿಬ್ಬಂದಿ, ಸರ್ಕಾರಿ ನೌಕರರು, ವ್ಯಕ್ತಿಗಳ ಮೊಬೈಲ್‌ ಸಂಖ್ಯೆಗಳು, ‘ನೀಟ್‌’ ವಿದ್ಯಾರ್ಥಿಗಳ ಮಾಹಿತಿ, ಇಂಧನ ಮತ್ತು ವಿದ್ಯುತ್‌ ವಲಯ, ಪ್ಯಾನ್‌ ಕಾರ್ಡ್‌ ದತ್ತಾಂಶಗಳೂ ಸೇರಿ ಸೂಕ್ಷ್ಮ ವಿವರಗಳನ್ನು ಒಳಗೊಂಡ ಸುಮಾರು 140 ಬಗೆಯ ಮಾಹಿತಿಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ಸೈಬರಾಬಾದ್‌ ಪೊಲೀಸ್‌ ಕಮಿಷನರ್‌ ಸ್ಟೀಫನ್‌ ರವೀಂದ್ರ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಗ್ಯಾಸ್‌ ಮತ್ತು ಪೆಟ್ರೋಲಿಯಂ ಫ್ರಾಂಚೈಸಿಗಳು, ಡಿ– ಮ್ಯಾಟ್‌ ಖಾತೆಗಳು, ವಿದ್ಯಾರ್ಥಿಗಳು, ಮಹಿಳೆಯರ ದತ್ತಾಂಶ, ಬೆಂಗಳೂರು ಮಹಿಳಾ ಗ್ರಾಹಕರ ದತ್ತಾಂಶ, ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಜನರ ದತ್ತಾಂಶ, ವಿಮೆ, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಹೊಂದಿರುವವರ (ಆ್ಯಕ್ಸಿಸ್‌, ಎಚ್‌ಎಸ್‌ಬಿಸಿ ಇತ್ಯಾದಿ ಬ್ಯಾಂಕ್‌ಗಳು) ದತ್ತಾಂಶ, ವಾಟ್ಸ್‌ಆ್ಯಪ್‌– ಫೇಸ್‌ಬುಕ್‌ ಬಳಕೆದಾರರು, ಐಟಿ ಉದ್ಯೋಗಿಗಳು, ಪದೇ ಪದೇ ವಿಮಾನದಲ್ಲಿ ಪ್ರಯಾಣಿಸುವವರ ದತ್ತಾಂಶಗಳನ್ನೂ ಈ ಜಾಲದವರು ಕದ್ದು ಮಾರುತ್ತಿದ್ದದ್ದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಕೆಲವರನ್ನು ಬಂಧಿಸಲಾಗಿದೆ. ಅವರು ಜಸ್ಟ್‌ ಡೈಲ್‌ ಮತ್ತು ಅದೇ ರೀತಿಯ ಇತರ ವೇದಿಕೆಗಳ ಮೂಲಕ ದತ್ತಾಂಶಗಳ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಅವರು ವಿವರಿಸಿದರು.

‘ಹೀಗೆ ಕದ್ದ ದತ್ತಾಂಶಗಳಿಂದ ಅಪರಿಚಿತರು ಪ್ರಮುಖ ಸಂಸ್ಥೆಗಳನ್ನು ಅನಧಿಕೃತವಾಗಿ ಪ್ರವೇಶಿಸಿ, ಅದನ್ನು ಬಳಸಬಹುದು. ರಕ್ಷಣಾ ಮತ್ತು ಸರ್ಕಾರಿ ಉದ್ಯೋಗಿಗಳ ಡೇಟಾವನ್ನು ಬೇಹುಗಾರಿಕೆಗೆ ಬಳಸಬಹುದು. ಇದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎದುರಾಗುವ ಸಾಧ್ಯತೆಯೂ ಇರುತ್ತದೆ. ಗಂಭೀರ ಅಪರಾಧ ಕೃತ್ಯಕ್ಕೂ ಇದು ಬಳಕೆಯಾಗಬಹುದು. ಪ್ಯಾನ್‌ ಕಾರ್ಡ್‌ ದತ್ತಾಂಶಗಳನ್ನು ಬಳಸಿ ಗಂಭೀರ ಆರ್ಥಿಕ ಅಪರಾಧಗಳನ್ನು ಎಸಗಬಹುದು. ಇನ್ನೂ ವಿವಿಧ ರೀತಿಯಲ್ಲಿ ದತ್ತಾಂಶಗಳನ್ನು ದುರ್ಬಳಕೆ ಮಾಡಿಕೊಂಡು ಸೈಬರ್‌ ಅಪರಾಧಗಳಿಗೆ ಕಾರಣವಾಗಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT