ಸೋಮವಾರ, ಮೇ 23, 2022
30 °C
ಪಶ್ಚಿಮ ಬಂಗಾಳ ಸರ್ಕಾರದ ಕ್ರಮ: ಸಮುದ್ರ ತೀರಕ್ಕೆ ಹೋಗದಂತೆ ಎಚ್ಚರಿಕೆ

ಜವಾದ್ ಭೀತಿ: 11 ಸಾವಿರ ಜನರ ಸ್ಥಳಾಂತರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಜವಾದ್‌’ ಚಂಡಮಾರುತ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ, ಪುರ್ಬಾ ಮೇದಿನಿಪುರ ಜಿಲ್ಲೆಗಳಲ್ಲಿ ಮುಂಜಾಗ್ರತೆಯಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸರ್ಕಾರ ಸ್ಥಳಾಂತರಿಸಿದೆ.

ಜವಾದ್‌ ಪರಿಣಾಮ ರಾಜ್ಯದ ಉತ್ತರ ಮತ್ತು ದಕ್ಷಿಣ 24 ಪರಗಣ, ಪುರ್ಬಾ, ಪಶ್ಚಿಮ ಮೆದಿನಾಪುರ, ಜಾರ್‌ಗ್ರಾಂ, ಹೌರಾ, ಹೂಗ್ಲಿ ಜಿಲ್ಲೆಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಪ್ರವಾಸಿಗರು, ಮೀನುಗಾರರು ಸಮುದ್ರ ತೀರದಿಂದ ದೂರ ಉಳಿಯಬೇಕು ಎಂದು ಸರ್ಕಾರ ಎಚ್ಚರಿಸಿದೆ.

ಚಂಡಮಾರುತದ ಕೇಂದ್ರ ಸ್ಥಾನ ಸದ್ಯ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 230 ಕಿ.ಮೀ ಹಾಗೂ ಒಡಿಶಾದ ಗೋಪಾಲಪುರದ 340 ಕಿ.ಮೀ ದಕ್ಷಿಣಕ್ಕಿದೆ. ಒಡಿಶಾದ ಪಾರದೀಪ್ ಜಿಲ್ಲೆಯ ನೈರುತ್ಯ ಭಾಗದ 490 ಕಿ.ಮೀ. ದೂರದಲ್ಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ದಕ್ಷಿಣ 24 ಪರಗಣ ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಗಳಲ್ಲಿ 11 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಕರಾವಳಿ ತೀರ ಪ್ರದೇಶದಿಂದ ಮೀನುಗಾರರು ದೋಣಿಗಳ ಸಮೇತ ತೀರಕ್ಕೆ ಮರಳಿದ್ದಾರೆ.

ಚಂಡಮಾರುತವು ಬಂಗಾಳಕೊಲ್ಲಿಯ ಈಶಾನ್ಯ ದಿಕ್ಕಿನತ್ತ ಅಂದರೆ ಒಡಿಶಾದ ಕರಾವಳಿ ತೀರದ ಅಭಿಮುಖವಾಗಿ ಸಾಗುವ ಸಂಭವವಿದೆ. ಪುರಿ ಜಿಲ್ಲೆಯನ್ನು ಭಾನುವಾರ ಮಧ್ಯಾಹ್ನದ ವೇಳೆಗೆ ತಲುಪುವ ಸಂಭವವಿದ್ದು, ಆ ವೇಳೆಗೆ ಅದರ ವೇಗವೂ ದುರ್ಬಲಗೊಳ್ಳಲಿದೆ ಎಂದು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಕೋಲ್ಕತ್ತ, ಪುರ್ಬಾ, ಪಶ್ಚಿಮ ಮೇದಿನಿಪುರ, ದಕ್ಷಿಣ 24 ಪರಗಣ, ಹೂಗ್ಲಿ, ಹೌರಾ ಜಿಲ್ಲೆಗಳ ವಿವಿಧೆಡೆ ಮಳೆ ಆಗಬಹುದು’ ಎಂದು ಎಚ್ಚರಿಸಿದೆ. ಮುಂಜಾಗ್ರತೆಯಾಗಿ ರಕ್ಷಣಾತಂಡಗಳನ್ನು ನಿಯೋಜಿಸಲಾಗಿದೆ  

 

‘ಜವಾದ್’ ದುರ್ಬಲಗೊಳ್ಳುವ ಸೂಚನೆ

ಭುವನೇಶ್ವರ: ‘ಜವಾದ್‌’ ಚಂಡಮಾರುತವು ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಹಾಗೂ ಒಡಿಶಾದ ಪುರಿ ಜಿಲ್ಲೆಯನ್ನು ತಲುಪುವ ವೇಳೆಗೆ ದುರ್ಬಲಗೊಳ್ಳುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. 

ಈ ರಾಜ್ಯಗಳಿಗೆ ಶನಿವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತವು ತಲುಪುವ ಅಂದಾಜಿಸಿತ್ತು. ಈಗ, ಇದು ದುರ್ಬಲಗೊಳ್ಳುವ ಸೂಚನೆಗಳಿಂದಾಗಿ ಉಭಯ ರಾಜ್ಯಗಳಿಗೂ ಸ್ವಲ್ಪ ಮಟ್ಟಿಗೆ ನಿರಾಳವಾದಂತಾಗಿದೆ.

ಹಂತಹಂತವಾಗಿ ದುರ್ಬಲಗೊಳ್ಳಲಿದ್ದು, ಮುಂದಿನ 12 ಗಂಟೆಗಳಲ್ಲಿ ಒಡಿಶಾ ಕರಾವಳಿಯ ಈಶಾನ್ಯ ಭಾಗ, ಪುರಿಯ ಆಸುಪಾಸು ತಲುಪುವ ಸೂಚನೆಗಳಿವೆ. ಇದರ ಪರಿಣಾಮ ಪುರಿ ಜಿಲ್ಲೆಯಲ್ಲಿ ಒಂದೆರಡು ಕಡೆ ಭೂಕುಸಿತ ಸಂಭವಿಸಬಹುದು ಎಂದು ಹವಾಮಾನ ಇಲಾಖೆಯು ತಿಳಿಸಿದೆ. 

ಪುರಿ ಜಿಲ್ಲೆಯಲ್ಲಿ ಕರಾವಳಿ ತೀರವನ್ನು ತಲುಪುವ ವೇಳೆಗೆ ಚಂಡಮಾರುತದ ವೇಗವು ಗಂಟೆಗೆ 90 ರಿಂದ 100 ಕಿ.ಮೀ ಇರಬಹುದು ಎಂದು ಐಎಂಡಿ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು