ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಮಿಸ್ತ್ರಿ ಸಾವು: ಕಾರು ಚಾಲನೆ ಮಾಡಿದ್ದು ಮುಂಬೈನ ಸ್ತ್ರೀರೋಗ ತಜ್ಞೆ

Last Updated 4 ಸೆಪ್ಟೆಂಬರ್ 2022, 15:35 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ಸೈರಸ್ ಮಿಸ್ತ್ರಿ ಸಾವಿಗೆ ಕಾರಣವಾದ ಅಪಘಾತಕ್ಕೀಡಾದ ಮರ್ಸಿಡಿಸ್ ಕಾರನ್ನು ಮುಂಬೈನ ಖ್ಯಾತ ಸ್ತ್ರೀರೋಗ ತಜ್ಞೆಯೊಬ್ಬರು ಚಲಾಯಿಸುತ್ತಿದ್ದರು. ರಾಂಗ್ ಸೈಡ್‌ನಿಂದ ಓವರ್‌ಟೆಕ್ ಮಾಡಲು ಯತ್ನಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಅಹಮದಾಬಾದ್‌ನಿಂದ ಮುಂಬೈಗೆ ಬರುತ್ತಿದ್ದ ಸಂದರ್ಭ ಕಾರು, ಮಹಾರಾಷ್ಟ್ರದ ಪಾಲ್ಘರ್ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಈ ದುರ್ಘಟನೆಯಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ವಾಹನದಲ್ಲಿದ್ದ ಮತ್ತೊಬ್ಬರು ಸಾವಿಗೀಡಾಗಿದ್ದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರು ಅತಿವೇಗದಿಂದ ಚಲಿಸುತ್ತಿತ್ತು ಮತ್ತು ರಾಂಗ್ ಸೈಡ್‌ನಿಂದ (ಎಡದಿಂದ) ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಅಪಘಾತದಲ್ಲಿ ಸ್ತ್ರೀರೋಗತಜ್ಞೆ ಅನಾಹಿತಾ ಪಾಂಡೋಲೆ (55) ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ (60) ಬದುಕುಳಿದಿದ್ದಾರೆ. ಮಿಸ್ತ್ರಿ (54) ಮತ್ತು ಡೇರಿಯಸ್ ಅವರ ಸಹೋದರ ಜಹಾಂಗೀರ್ ಪಾಂಡೋಲೆ ಅವರು ಸಾವಿಗೀಡಾಗಿದ್ದಾರೆ,

ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಂಬೈನಿಂದ ಸುಮಾರು 120 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮಿಸ್ತ್ರಿ ಮತ್ತು ಜಹಾಂಗೀರ್ ಹಿಂದಿನ ಸೀಟಿನಲ್ಲಿ ಇದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಡೇರಿಯಸ್, ಅನಾಹಿತಾ ಅವರೊಂದಿಗೆ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು ಎಂದು ಅವರು ಹೇಳಿದ್ದಾರೆ.

‘ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು ಮತ್ತು ಎಡಭಾಗದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದರು, ಆದರೆ, ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದೆ’ಎಂದು ರಸ್ತೆ ಬದಿಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿ ಮರಾಠಿ ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ.

‘ನಾವು ಅಪಘಾತದ ಸ್ಥಳಕ್ಕೆ ಧಾವಿಸಿದೆವು. ಆದರೆ, ವಾಹನ ಅಥವಾ ಗಾಯಗೊಂಡ ವ್ಯಕ್ತಿಗಳನ್ನು ಮುಟ್ಟಲಿಲ್ಲ. 10 ನಿಮಿಷಗಳಲ್ಲಿಪೊಲೀಸರು ಸಹಾಯಕ್ಕೆ ಬಂದರು. ಇಬ್ಬರು ಗಾಯಗೊಂಡ ವ್ಯಕ್ತಿಗಳನ್ನು ಕಾರಿನಿಂದ ಹೊರತಂದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಉಳಿದ ಇಬ್ಬರು ಮೃತಪಟ್ಟಿದ್ದರು’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT