ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Elections 2022 | ಕಾಂಗ್ರೆಸ್‌ ಮುಕ್ತ ಒಕ್ಕೂಟಕ್ಕೆ ಮಮತಾ ಯತ್ನ

ಕಾಂಗ್ರೆಸ್‌ರಹಿತ ವಿಪಕ್ಷಗಳ ಒಕ್ಕೂಟ ರಚನೆಗೆ ಮಮತಾ ಮತ್ತೆ ಯತ್ನ
Last Updated 14 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಕೋಲ್ಕತ್ತ: ‘ದೇಶದ ಯಾವ ಪ್ರಾದೇಶಿಕ ಪಕ್ಷದ ಜತೆಗೂ ಕಾಂಗ್ರೆಸ್‌ಗೆ ಉತ್ತಮ ಸಂಬಂಧವಿಲ್ಲ. ಹೀಗಾಗಿ ಕಾಂಗ್ರೆಸ್‌ ತನ್ನ ದಾರಿ ತಾನು ನೋಡಿಕೊಳ್ಳಬಹುದು. ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟುಬಿಜೆಪಿ ವಿರೋಧಿ ಮೈತ್ರಿಕೂಟ ರಚಿಸುವ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ರಾವ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜತೆ ಮಮತಾ ಭಾನುವಾರವಷ್ಟೇ ಮಾತುಕತೆ ನಡೆಸಿದ್ದರು. ಅದರ ಮರುದಿನವೇ ಅವರು ಹೀಗೆ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನಾಲ್ಕು ನಗರಪಾಲಿಕೆಗಳಲ್ಲಿ ಟಿಎಂಸಿಯು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದ ನಂತರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಮತಾ ಈ ಮಾತು ಹೇಳಿದ್ದಾರೆ.

‘ದೇಶದ ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ಬಿಜೆಪಿ ಒಕ್ಕೂಟ ವ್ಯವಸ್ಥೆಯನ್ನು ಹತ್ತಿಕ್ಕುತ್ತಿದೆ. ಸಂವಿಧಾನಕ್ಕೆ ಧಕ್ಕೆ ತರುತ್ತಿದೆ. ನಾವೆಲ್ಲರೂ ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕಿದೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ನಮಗೆ ಜತೆಯಾಗುವಂತೆ ಕಾಂಗ್ರೆಸ್‌ ಮತ್ತು ಎಡಪಕ್ಷಗಳನ್ನು ಕೇಳಿಕೊಳ್ಳಲಾಗಿತ್ತು. ಅವು ತಮ್ಮನ್ನು ತಾವು ಜಾತ್ಯತೀತ ಪಕ್ಷಗಳು ಎಂದು ಕರೆದುಕೊಳ್ಳುತ್ತವೆ. ಅಂತಹವರು ತಾವೇ ಬಂದು ಈ ಹೋರಾಟಕ್ಕೆ ಜತೆಯಾಗಬೇಕಿತ್ತು. ಆದರೆ ಅವು ನಮಗೆ ಜತೆಯಾಗಲಿಲ್ಲ’ ಎಂದು ಮಮತಾ ಆರೋಪಿಸಿದ್ದಾರೆ.

2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಇದನ್ನು ಉದ್ದೇಶಿಸಿ ಮಮತಾ ಈ ಮಾತು ಹೇಳಿದ್ದಾರೆ.

‘ಬಿಜೆಪಿ ಸೋತರೆ ಭಾರತ ಸುರಕ್ಷಿತ’

‘ಭಾರತವನ್ನು ರಕ್ಷಿಸಬೇಕು ಅಂದರೆ, 2024ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಟ್ಟಬೇಕು. ಆ ಕೆಲಸ ಆಗಬೇಕು ಅಂದರೆ ಈಗ ಉತ್ತರ ಪ್ರದೇಶವನ್ನು ರಕ್ಷಿಸಬೇಕು. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ಟಿಎಂಸಿ ಸ್ವತಂತ್ರವಾಗಿಯೇ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದೆ. ಆದರೆ, ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಈ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸಿಲ್ಲ. ಬದಲಿಗೆ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಿದೆ’ ಎಂದು ಅವರು ಹೇಳಿದ್ದಾರೆ.

ಶೀಘ್ರವೇ ಸಭೆ: ಸ್ಟಾಲಿನ್

‘ಮಮತಾ ದೀದಿ ಅವರು ಕರೆ ಮಾಡಿದ್ದರು.ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ಸಭೆ ನಡೆಸುವ ಬಗ್ಗೆ ಅವರು ಸಲಹೆ ನೀಡಿದ್ದಾರೆ. ರಾಜ್ಯದ ಸ್ವಾಯತ್ತೆಯನ್ನು ಎತ್ತಿಹಿಡಿಯಲು ಡಿಎಂಕೆ ಸದಾ ಬದ್ಧವಾಗಿದೆ. ದೆಹಲಿಯಲ್ಲಿ ಈ ಸಭೆ ಶೀಘ್ರವೇ ನಡೆಯಲಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

‘ಮಮತಾ ಅವರು ಕರೆ ಮಾಡಿದ್ದರು. ನೀವು ಬಂಗಾಳಕ್ಕೆ ಬನ್ನಿ ಅಥವಾ ನಾನೇ ಹೈದರಾಬಾದ್‌ಗೆ ಬರುತ್ತೇನೆ ಎಂದರು. ನಿಮಗೆ ಸದಾ ಸ್ವಾಗತ ಎಂದಿದ್ದೇನೆ. ಅವರು ಯಾವಾಗ ಬೇಕಾದರೂ ಬರಬಹುದು. ದೇಶದಲ್ಲಿ ಬಿಜೆಪಿ ಹೊರತುಪಡಿಸಿದ ಮತ್ತು ಕಾಂಗ್ರೆಸ್‌ ಹೊರತುಪಡಿಸಿದ ಎಷ್ಟೋ ರಾಜಕೀಯ ಪಕ್ಷಗಳಿವೆ. ಈ ಬಗ್ಗೆ ಚರ್ಚಿಸಿದ್ದೇವೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ರಾವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT