ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಅಮಾನತು: ಭಾರವಾದ ಹೃದಯದ ನಿರ್ಧಾರ ಎಂದ ಪೀಯೂಷ್‌ ಗೋಯಲ್‌

Last Updated 26 ಜುಲೈ 2022, 14:33 IST
ಅಕ್ಷರ ಗಾತ್ರ

ನವದೆಹಲಿ:19 ಸಂಸದರನ್ನು ಅಮಾನತುಗೊಳಿಸಿದ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಳ್ಳಲಾಗಿದೆ ಎಂದು ಆಡಳಿತಾರೂಢ ಬಿಜೆಪಿ ಹೇಳಿದೆ.

ಸಭಾ ನಾಯಕ ಪೀಯೂಷ್‌ ಗೋಯಲ್‌ ಅವರು, ಸಂಸತ್‌ನಲ್ಲಿ ಚರ್ಚೆಯಿಂದ ದೂರ ಸರಿಯುತ್ತಿರುವುದು ಸರ್ಕಾರವಲ್ಲ, ವಿರೋಧ ಪಕ್ಷಗಳು ಚರ್ಚೆಯಿಂದ ಹೊರಗುಳಿಯುತ್ತಿವೆ ಎಂದು ದೂರಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್-19ನಿಂದಸಂಪೂರ್ಣವಾಗಿ ಚೇತರಿಸಿಕೊಂಡು ಸಂಸತ್ತಿಗೆ ಮರಳಿದ ನಂತರ ಬೆಲೆ ಏರಿಕೆ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಅವರು ಪುನರುಚ್ಚರಿಸಿದರು.

‘ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ಹಲವು ದೇಶಗಳಿಗಿಂತ ಭಾರತ ಉತ್ತಮವಾಗಿ ನಿಭಾಯಿಸಿದೆ. ಬೆಲೆ ಏರಿಕೆ ನಿಭಾಯಿಸಲು ತೆಗೆದುಕೊಂಡ ಪ್ರಮುಖ ಕ್ರಮಗಳ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಲು ಸರ್ಕಾರ ಉತ್ಸುಕವಾಗಿದೆ’ ಎಂದು ಗೋಯಲ್ ಹೇಳಿದರು.

ಕಾಂಗ್ರೆಸ್‌, ಟಿಎಂಸಿ ಹಾಗೂ ಎಡಪಕ್ಷಗಳು ಸೇರಿ ವಿರೋಧ ಪಕ್ಷಗಳ ಸದಸ್ಯರು ಹೊಸ ತೆರಿಗೆ ಪರಿಚಯಿಸಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡ ಜಿಎಎಸ್‌ಟಿ ಮಂಡಳಿಯ ಭಾಗವಾಗಿದ್ದರು ಎಂದು ಅವರು, ಜಿಎಸ್‌ಟಿ ವಿರೋಧಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಅಮಾನತಾದ ಕಾಂಗ್ರೆಸ್‌ ಸಂಸದರ ಪ್ರತಿಭಟನೆ
ಲೋಕಸಭೆ ಕಲಾಪದಿಂದ ಅಮಾನತುಗೊಂಡಿರುವ ಕಾಂಗ್ರೆಸ್‌ನ ನಾಲ್ವರು ಸಂಸದರು ವಿರೋಧ ಪಕ್ಷಗಳ ನಾಯಕರ ನೇತೃತ್ವದಲ್ಲಿ ಸ್ಪೀಕರ್‌ ಕ್ರಮ ವಿರೋಧಿಸಿ ಮಂಗಳವಾರ ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಅಮಾನತುಗೊಂಡ ಸಂಸದರಾದ ಮಣಿಕ್ಕಂ ಟ್ಯಾಗೋರ್, ರಮ್ಯಾ ಹರಿದಾಸ್, ಟಿ.ಎನ್. ಪ್ರತಾಪನ್ ಮತ್ತು ಎಸ್‌. ಜ್ಯೋತಿ ಮಣಿ ಅವರು ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್, ಜೆಡಿಎಸ್, ಎನ್‌ಸಿಪಿ, ಎಡಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಂಸದರ ಅಮಾನತು ಕ್ರಮವನ್ನು ಟೀಕಿಸಿರುವಕಾಂಗ್ರೆಸ್‌ ನಾಯಕ, ಜೈರಾಮ್‌ ರಮೇಶ್‌ ಅವರು ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸತ್ಯ ಹೇಳಲು, ತುರ್ತು ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ನೀಡುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

ಮುಂಗಾರು ಅಧಿವೇಶನದ ಆರಂಭದಿಂದಲೇ ವಿರೋಧ ಪಕ್ಷಗಳ ಸಂಸದರು ಕಲಾಪದಲ್ಲಿ ನಡೆಸುತ್ತಿರುವ ನಿರಂತರ ಅಡೆತಡೆಗಳ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇದೇ ಹಿನ್ನೆಲೆಯಲ್ಲಿ ಸೋಮವಾರ ನಾಲ್ವರು ಕಾಂಗ್ರೆಸ್‌ ಸಂಸದರನ್ನು ಅವರು ಕಲಾಪದಿಂದ ಅಮಾನತುಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT