ಮಂಗಳವಾರ, ಸೆಪ್ಟೆಂಬರ್ 21, 2021
28 °C

ಜಮ್ಮ–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ: ಸ್ವಾತಂತ್ರ್ಯ ಭಾಷಣದಲ್ಲಿ ಘೋಷಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಈ ವರ್ಷದೊಳಗೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಘೋಷಿಸಬೇಕು ಎಂದು ಮಾಜಿ ಹಣಕಾಸು ಸಚಿವ ಯಶವಂತ್‌ ಸಿನ್ಹಾ ನೇತೃತ್ವದ ರಾಷ್ಟ್ರ ಮಂಚ್‌ ವೇದಿಕೆ ಒತ್ತಾಯಿಸಿದೆ.

ಇದೇ ವೇಳೆ, ಬಿಜೆಪಿಯೇತರ ಪಕ್ಷಗಳು, ಕಣಿವೆ ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆಯೂ ವೇದಿಕೆ ಆಗ್ರಹ ಪಡಿಸಿದೆ.

ವೇದಿಕೆ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಜಮ್ಮು ಮತ್ತು ಕಾಶ್ಮೀರದ ಕಾಯಂ ನಿವಾಸಿಗಳ ಸವಲತ್ತು ಮತ್ತು ಹಕ್ಕುಗಳನ್ನು ರಕ್ಷಿಸಿದ್ದ ‘ವಿಶೇಷ ಸ್ಥಾನಮಾನವನ್ನು‘ ಕೇಂದ್ರ ಸರ್ಕಾರ  ಆಗಸ್ಟ್ 5, 2019 ರಂದು ರದ್ದುಗೊಳಿಸಿದ ನಂತರ ಅಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಇದೇ ವೇಳೆ ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸಿದ ಮೇಲೆ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗೆ ಇಳಿದಿವೆ‘ ಎಂದು ವಿವರಿಸಲಾಗಿದೆ.

‘ಕೇಂದ್ರ ಕೈಗೊಂಡಿರುವ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮಾಡಿದ ಅವಮಾನ, ದ್ರೋಹ ಆಗಿದೆ. ವಿಶೇಷ ಸ್ಥಾನಮಾನ ರದ್ಧತಿಯಿಂದಾಗಿ ಅಲ್ಲಿನ ನಾಗರಿಕರು ತೀವ್ರ ನೋವು ಅನುಭವಿಸುತ್ತಿದ್ದಾರೆ‘ ಎಂದು ರಾಷ್ಟ್ರಮಂಚ್‌ ಹೇಳಿದೆ.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಜಾಪ್ರಭುತ್ವದ ಪ್ರಮುಖ ಪಾಲುದಾರರಾಗಿರುವ ಅಲ್ಲಿನ ನಾಗರಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಯಾವುದೇ ರೀತಿಯ ಸಮಾಲೋಚನೆ ನಡೆಸದೇ ವಿಶೇಷ ಸ್ಥಾನಮಾನ ರದ್ದು ಮಾಡಿದೆ. ಈ ಮೂಲಕ ನಾಗರಿಕರಿಗಿದ್ದ ಮೂಲಭೂತ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದೆ‘ ಎಂದು ಹೇಳಿಕೆಯಲ್ಲಿ ವೇದಿಕೆ ದೂರಿದೆ.

ಪ್ರಸ್ತುತ ತೃಣಮೂಲ ಕಾಂಗ್ರೆಸ್‌ನಲ್ಲಿ ಉಪಾಧ್ಯಕ್ಷರಾಗಿರುವ ಯಶವಂತ ಸಿನ್ಹಾ ಅವರು 2017 ಮತ್ತು 2019 ರಲ್ಲಿ ಸ್ವತಂತ್ರವಾಗಿ ಎರಡು ನಿಯೋಗಗಳೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಯ ಮೌಲ್ಯಮಾಪನ ಮಾಡಿದ್ದರು. ನಂತರ ಕಣಿವೆ ರಾಜ್ಯವನ್ನು ಸಾಮಾನ್ಯ ಸ್ಥಿತಿಗೆ ತರಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು