ಶುಕ್ರವಾರ, ಮಾರ್ಚ್ 24, 2023
22 °C

ಕುಡಿತದಿಂದ ವಾಹನ ಅಪಘಾತ: ರಾಜ್ಯದಲ್ಲಿ ಇಳಿದ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮದ್ಯಪಾನ ಮಾಡಿ ವಾಹನ ಓಡಿಸಿ ಅಪಘಾತದಲ್ಲಿ ಮೃತಪಟ್ಟವರ ಪ್ರಮಾಣ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ರಸ್ತೆಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಂಗಳವಾರ ಲಿಖಿತ ಉತ್ತರ ನೀಡಿದ ಅವರು, 2017ರಲ್ಲಿ 169 ಪ್ರಕರಣ, 2018ರಲ್ಲಿ 139 ಹಾಗೂ 2019ರಲ್ಲಿ 132 ಪ್ರಕರಣಗಳು ವರದಿಯಾಗಿವೆ ಎಂದಿದ್ದಾರೆ. 

ದೇಶದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 2019ರಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಕುಸಿದಿದೆ. 2017ರಲ್ಲಿ 14,071 ಮಂದಿ, 2018ರಲ್ಲಿ 12,018 ಮಂದಿ ಹಾಗೂ 2019ರಲ್ಲಿ 12,256 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಉತ್ತರ ಪ್ರದೇಶದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ (4,493) ಅತಿಹೆಚ್ಚು. ಪಂಜಾಬ್‌ನಲ್ಲಿ 1,290 ಪ್ರಕರಣ ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆ ಕಂಡಿದೆ. ಬಿಹಾರದಲ್ಲಿ ಇಂತಹ ಯಾವುದೇ ಪ್ರಕರಣ ನಮೂದಾಗಿಲ್ಲ. ಗೋವಾ, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಇವುಗಳ ಪ್ರಮಾಣ 10ಕ್ಕಿಂತಲೂ ಕಡಿಮೆ ಇದೆ ಎಂದು ಅವರು ಮಾಹಿತಿ ನೀಡಿದರು. 

ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಂದಿಕೊಂಡ ಜಾಗದಲ್ಲಿ ಮದ್ಯದಂಗಡಿ ತೆರೆಯಲು ಪರವಾನಗಿ ನೀಡದಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ ಎಂದು ಗಡ್ಕರಿ ತಿಳಿಸಿದರು. ಆದರೆ ರಾಷ್ಟ್ರೀಯ ಹೆದ್ದಾರಿಗುಂಟ ಮದ್ಯದಂಗಡಿ ತೆರೆಯುವ ಸಂಬಂಧ ಪ್ರಸ್ತುತ ಇರುವ ನಿಯಮಾವಳಿಯನ್ನು ಪರಿಶೀಲಿಸುವಂತೆ ರಾಜ್ಯಗಳು ಕೇಂದ್ರಕ್ಕೆ ಮನವಿ ಮಾಡಿವೆ. 

ಮದ್ಯಪಾನ ಮಾಡಿ ವಾಹನ ಚಲಾಯಿಸುವುದರ ಕುರಿತು ಜಾಗೃತಿ ಮೂಡಿಸುವ ಕೆಲಸದ ಜೊತೆಗೆ ನಿಯಮ ಉಲ್ಲಂಘನೆ ಮಾಡಿದವರನ್ನು ಪತ್ತೆಹಚ್ಚುವ ಆಲ್ಕೊಮೀಟರ್ (ಬ್ರೀತ್ ಅನಲೈಸರ್) ಉಪಕರಣಗಳನ್ನು ಖರೀದಿಸಲು ರಾಜ್ಯಗಳಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು

***

ಸಮಗ್ರ ಅಪಘಾತ ದತ್ತಾಂಶ ಸಂಗ್ರಹ ಯೋಜನೆ

ರಸ್ತೆ ಅಪಘಾತದ ನಿಖರ ದತ್ತಾಂಶಗಳನ್ನು ಸಂಗ್ರಹಿಸುವ ಯೋಜನೆಯನ್ನು (ಐಆರ್‌ಎಡಿ) ರಸ್ತೆ ಸಾರಿಗೆ ಸಚಿವಾಲಯ ಕೈಗೆತ್ತಿಕೊಳ್ಳಲಿದೆ. ಮೊದಲಿಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ಯೋಜನೆಯ ಪ್ರಕಾರ, ಪೊಲೀಸರು, ಸಾರಿಗೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಅಪಘಾತದ ಮಾಹಿತಿ ಪಡೆದು ಐಆರ್‌ಎಡಿ ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸಬೇಕಿದೆ. ಇದಕ್ಕೆ ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಆ ಬಳಿಕ, ಅಪಘಾತಕ್ಕೆ ಕಾರಣವನ್ನು ಪತ್ತೆಹಚ್ಚಿ, ಪರಿಹಾರ ಕ್ರಮಗಳನ್ನು ಸಂಬಂಧಪಟ್ಟವರು ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಗಡ್ಕರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು