ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಆರ್‌ಒಪಿ ಪಾವತಿ – 'ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ'

Last Updated 13 ಮಾರ್ಚ್ 2023, 11:41 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಅಡಿ ಅರ್ಹ ಪಿಂಚಣಿದಾರರಿಗೆ ಬಾಕಿ ಪಾವತಿಯನ್ನು ನಾಲ್ಕು ಕಂತುಗಳ ಮೂಲಕ ಪಾವತಿಸುವುದಾಗಿ ಪ್ರಕಟಣೆ ಹೊರಡಿಸುವ ಮೂಲಕ ರಕ್ಷಣಾ ಸಚಿವಾಲಯವು ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಒಆರ್‌ಒಪಿ ಕುರಿತು ಜನವರಿ 20ರಂದು ಹೊರಡಿಸಿದ್ದ ಪ್ರಕಟಣೆಯನ್ನು ಕೂಡಲೇ ಹಿಂಪಡೆಯುವಂತೆ ರಕ್ಷಣಾ ಸಚಿವಾಲಯಕ್ಕೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹನ್‌ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು ಹೇಳಿದೆ.

‘ಒಪಿಒಆರ್‌ ಬಾಕಿ ಪಾವತಿಯ ಮೊದಲ ಕಂತನ್ನು ಸಚಿವಾಲಯವು ಅರ್ಹ ಪಿಂಚಣಿದಾರರಿಗೆ ಈಗಾಗಲೇ ಪಾವತಿಸಿದೆ. ಬಾಕಿ ಪಾವತಿಯನ್ನು ನೀಡಲು ಮತ್ತಷ್ಟು ಕಾಲಾವಕಾಶ ಬೇಕು’ ಎಂದು ಅಟಾರ್ನಿ ಜನರಲ್ ಆರ್‌. ವೆಂಕಟರಮಣಿ ಅವರು ಪೀಠಕ್ಕೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಮೊದಲಿಗೆ ಜನವರಿ 20ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಿರಿ. ಕಾಲಾವಕಾಶ ಕೋರಿ ನೀವು ಸಲ್ಲಿಸಿರುವ ಅರ್ಜಿಯನ್ನು ನಂತರ ಪರಿಶೀಲಿಸುತ್ತೇವೆ’ ಎಂದರು.

ಜನವರಿ 20ರ ಪ್ರಕಟಣೆಯು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ. ಒಆರ್‌ಒಪಿ ಬಾಕಿ ಪಾವತಿಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸುವುದಾಗಿ ಸಚಿವಾಲಯವು ಏಕಪಕ್ಷೀಯವಾಗಿ ಘೋಷಿಸಲು ಸಾಧ್ಯವಿಲ್ಲ ಎಂದ ಪೀಠ ಹೇಳಿತು. ಜೊತೆಗೆ, ಬಾಕಿ ಪಾವತಿಯ ಮೊತ್ತ, ಪಾವತಿಗೆ ಅನುಸರಿಸಲಾಗುವ ವಿಧಾನ ಮತ್ತು ಬಾಕಿ ಪಾವತಿಗೆ ಆದ್ಯತಾ ವರ್ಗ ಯಾವುದು ಎಂಬ ಕುರಿತು ವಿವರ ಹೊಂದಿರುವ ಟಿಪ್ಪಣಿಯನ್ನು ಸಿದ್ಧಪಡಿಸುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿತು.

‘ಬಾಕಿ ಪಾವತಿ ನೀಡಲು ಕೆಲವು ರೀತಿಯ ವರ್ಗೀಕರಣ ಮಾಡುವ ಅಗತ್ಯವಿದೆ. ಹೆಚ್ಚು ವಯಸ್ಸಾದವರಿಗೆ ಮೊದಲ ಆದ್ಯತೆ ನೀಡಬೇಕು. ಈ ಕುರಿತ ವ್ಯಾಜ್ಯ ಆರಂಭವಾದಾಗಿನಿಂದ ಸುಮಾರು 4 ಲಕ್ಷ ಪಿಂಚಣಿದಾರರು ಮೃತಪಟ್ಟಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ನಿವೃತ್ತ ಸೇನಾ ಸಿಬ್ಬಂದಿಗೆ ಒಆರ್‌ಒಪಿ ಅಡಿ ಪಿಂಚಣಿ ಬಾಕಿ ಪಾವತಿ ಮಾಡಲು ಮಾರ್ಚ್‌ 15ರ ವರೆಗೆ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್‌ ಜನವರಿ 9ರಂದು ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT