ಶನಿವಾರ, ಮೇ 21, 2022
23 °C
ಪ್ರಧಾನಿ ಮೌನ ಪ್ರಶ್ನಿಸಿ ಹೇಳಿಕೆ ನೀಡಿದ್ದ ಪ್ರತಿಪಕ್ಷಗಳಿಗೆ ನಡ್ಡಾ ತಿರುಗೇಟು

ವೋಟ್ ಬ್ಯಾಂಕ್‌ ರಾಜಕೀಯ ಇನ್ನು ನಡೆಯದು: ಬಿಜೆಪಿ ಅಧ್ಯಕ್ಷ ನಡ್ಡಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವಿರೋಧ ಪಕ್ಷಗಳ ವೋಟ್ ಬ್ಯಾಂಕ್‌ ರಾಜಕಾರಣ ಮತ್ತು ಒಡೆದು ಆಳುವ ನೀತಿಯ ರಾಜಕಾರಣವು ದೇಶದಲ್ಲಿ ಇನ್ನು ನಡೆಯದು’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಪಾದಿಸಿದ್ದಾರೆ.

‘ದೇಶದಲ್ಲಿ ಕೋಮುಗಲಭೆ ಮತ್ತು ಧ್ವೇಷ ಭಾಷಣ ಬೆಳವಣಿಗೆ ಕುರಿತಂತೆ ಪ್ರಧಾನಿ ಮೌನ ವಹಿಸಿದ್ದಾರೆ’ ಎಂದು ವಿವಿಧ ವಿರೋಧಪಕ್ಷಗಳ ನಾಯಕರು ನೀಡಿದ್ದ ಜಂಟಿ ಹೇಳಿಕೆಗೆ ಪ್ರತಿಯಾಗಿ ನಡ್ಡಾ ಅವರು ಜನತೆಗೆ ಬಹಿರಂಗಪತ್ರ ಬರೆದಿದ್ದಾರೆ.

ಪ್ರಧಾನಿ ಮೋದಿ ಅವರು ‘ಸಬ್‌ಕಾ ಸಾತ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌ ಮತ್ತು ಸಬ್‌ಕಾ ಪ್ರಯಾಸ್’ ಚಿಂತನೆಗೆ ಒತ್ತು ನೀಡಿದ್ದಾರೆ. ಇದು, ಭಾರತೀಯರ ಅಭ್ಯುದಯಕ್ಕೆ ಹೆಚ್ಚಿನ ಬಲ ನೀಡುತ್ತಿದೆ ಎಂದೂ ಹೇಳಿದ್ದಾರೆ.

‘ಜಂಟಿ ಹೇಳಿಕೆಯನ್ನು ನೀಡುವ ಮೂಲಕ ವಿರೋಧಪಕ್ಷಗಳ ಮುಖಂಡರು, ದೇಶದ ಪ್ರಗತಿಶೀಲ ಚಿಂತನೆಯ ಮೇಲೆ ದಾಳಿ ನಡೆಸಿದ್ದಾರೆ. ಪ್ರಗತಿಗಾಗಿ ಕಠಿಣ ಶ್ರಮ ಪಡುತ್ತಿರುವ ನಾಗರಿಕರಲ್ಲಿ ಆತಂಕ ಮೂಡಿಸುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

ತಿರಸ್ಕೃತ ಮತ್ತು ಉತ್ಸಾಹ ಕಳೆದುಕೊಳ್ಳುತ್ತಿರುವ ಪಕ್ಷಗಳು ಅಭಿವೃದ್ಧಿ ರಾಜಕಾರಣ ಚಿಂತನೆಗೆ ತಡೆಯೊಡ್ಡುತ್ತಿವೆ. ಮತ್ತೆ, ವೋಟ್‌ ಬ್ಯಾಂಕ್‌ ಮತ್ತು ಒಡೆದು ಆಳುವ ನೀತಿ ರಾಜಕಾರಣದಡಿ ಆಶ್ರಯ ಪಡೆಯಲು ಯತ್ನಿಸುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಮತ್ತೆ ಒಟ್ಟಾಗಿರುವ ವಿರೋಧಪಕ್ಷಗಳ ನಾಯಕರು ಜಂಟಿ ಹೇಳಿಕೆ ಮೂಲಕ ಅಭಿವೃದ್ಧಿ ಚಿಂತನೆಗೆ ಧಕ್ಕೆ ತಂದಿದ್ದಾರೆ. ಭಾರತದ ಯುವಜನರಿಗೆ ಈಗ ಅವಕಾಶಗಳು ಬೇಕು, ಅಡೆತಡೆಗಳಲ್ಲ, ಅಭಿವೃದ್ಧಿ ಬೇಕು, ಇಬ್ಭಾಗವಲ್ಲ. ಎಲ್ಲ ಸ್ತರ ಹಾಗೂ ವಯಸ್ಸಿನ ಜನರು ಈಗ ಬಡತನದ ವಿರುದ್ಧ ಹೋರಾಟ ನಡೆಸಲು ಒಟ್ಟಾಗಿದ್ದಾರೆ. ಇದರಿಂದಾಗಿ ಭಾರತ ಪ್ರಗತಿ ಹೊಂದುತ್ತಿದೆ’ ಎಂದು ಹೇಳಿದ್ದಾರೆ.

‘ವಿರೋಧಪಕ್ಷಗಳು ಇನ್ನಾದರೂ ತಮ್ಮ ಚಿಂತನೆಯ ಪಥ ಬದಲಿಸಬೇಕು. ಅಭಿವೃದ್ಧಿ ರಾಜಕಾರಣ ಮಾಡಬೇಕು. ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವವರಿಗೆ ಇತ್ತೀಚಿನ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಕಣ್ತೆರಸಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು