ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ: ದೆಹಲಿ ಗಡಿ ಸ್ಥಗಿತದ ಭೀತಿ

ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳ ನಿರ್ಧಾರ
Last Updated 30 ನವೆಂಬರ್ 2020, 20:53 IST
ಅಕ್ಷರ ಗಾತ್ರ

ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ‘ದೆಹಲಿ ಚಲೊ’ ಪ್ರತಿಭಟನೆ ಐದನೇ ದಿನ ಪೂರ್ತಿಗೊಳಿಸಿದೆ. ರೈತರ ಪ್ರತಿಭಟನೆಯ ಸ್ಥಳವಾಗಿ ಪರಿವರ್ತನೆ ಆಗಿರುವ ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಗೆ ಸೋಮವಾರ ಮತ್ತಷ್ಟು ರೈತರು ಬಂದು ಸೇರಿದ್ದಾರೆ.

ದೆಹಲಿ-ಹರಿಯಾಣದ ಗಾಜಿಯಾಬಾದ್‌ ಗಡಿಯಲ್ಲಿ ಸೋಮವಾರದಿಂದ ಪ್ರತಿಭಟನೆ ಆರಂಭವಾಗಿದೆ. ಆ ಗಡಿ
ಯಿಂದ ರೈತರು ದೆಹಲಿ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಕಾಂಕ್ರೀಟ್ ಬ್ಲಾಕ್‌ಗಳನ್ನು ಇರಿಸಿದ್ದಾರೆ.ದೆಹಲಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಗಡಿ ಹೆದ್ದಾರಿಗಳನ್ನು ಬಂದ್ ಮಾಡುವುದಾಗಿ ರೈತರು ಬೆದರಿಕೆ ಹಾಕಿರುವ ಕಾರಣ, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ದೆಹಲಿಗೆ ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯವಾಗುವ ಅಪಾಯವಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸೋಮವಾರ ಬೆಳಿಗ್ಗೆ ಸಭೆ ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಏನನ್ನು ಚರ್ಚಿಸಲಾಯಿತು ಎಂಬುದರ ಮಾಹಿತಿ ಬಹಿರಂಗವಾಗಿಲ್ಲ.

ನಿರ್ಣಾಯಕ ಹೋರಾಟ: ‘ಈಗ ನಾವು ನಡೆಸುತ್ತಿರುವ ಹೋರಾಟ ನಿರ್ಣಾಯಕವಾದುದು. ನಮ್ಮ ಬೇಡಿಕೆಯಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುತ್ತೇವೆ. ಸರ್ಕಾರವು ಯಾವುದೇ ಷರತ್ತು ಇಲ್ಲದೆ ಮಾತುಕತೆ ನಡೆಸುವುದಾದರೆ, ಭಾಗಿಯಾಗಲು ನಾವು ಸಿದ್ಧರಿದ್ದೇವೆ’ ಎಂದು ರೈತ ನಾಯಕ ಗುರ್ಮೀತ್ ಸಿಂಗ್ ಹೇಳಿದ್ದಾರೆ.

ಮತ್ತೆ ಸಮರ್ಥನೆ

ವಾರಾಣಸಿ: ‘ದಶಕಗಳ ಕಾಲ ರೈತರನ್ನು ವಂಚಿಸಿದ್ದವರೇ ಈಗಲೂ ಈ ಐತಿಹಾಸಿಕ ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

‘ಹಳೆಯ ಮಂಡಿ ವ್ಯವಸ್ಥೆಯೇ ಚೆನ್ನಾಗಿದೆ ಎನ್ನುವುದಾದರೆ, ಅದನ್ನೇ ಅನುಸರಿಸಬಹುದು. ಅದನ್ನು ನಾವು ರದ್ದುಪಡಿಸಿಲ್ಲ. ಮಂಡಿಗಳಲ್ಲಿ ದೊರೆಯುವ ಕನಿಷ್ಠ ಬೆಂಬಲ ಬೆಲೆಯನ್ನೂ ರದ್ದುಪಡಿಸಿಲ್ಲ. ಆದರೆ ಈ ಬಗ್ಗೆ ತಪ್ಪು ಮಾಹಿತಿ ನೀಡಿ ರೈತರ ಹಾದಿ ತಪ್ಪಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಹೆಸರಿನಲ್ಲಿ ರೈತರನ್ನು ಈ ಹಿಂದೆ ವಂಚಿಸುತ್ತಿದ್ದರು ಈಗ ಅವರ ದಾರಿ ತಪ್ಪಿಸಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT