ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ಸಿದ್ಧ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

Last Updated 1 ಏಪ್ರಿಲ್ 2022, 4:15 IST
ಅಕ್ಷರ ಗಾತ್ರ

ನವದೆಹಲಿ: ‘ದೇಶಕ್ಕಾಗಿ ನಾನು ಪ್ರಾಣ ತ್ಯಾಗಕ್ಕೂ ಸಿದ್ಧ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುರುವಾರ ಹೇಳಿದ್ದಾರೆ.

ಬಿಜೆಪಿಯ ಯುವ ಘಟಕ ಭಾರತೀಯ ಜನತಾ ಯುವ ಮೋರ್ಚಾ ಸದಸ್ಯರು ತಮ್ಮ ನಿವಾಸದ ಹೊರಗೆ ದಾಳಿ ನಡೆಸಿ, ಆಸ್ತಿ ಧ್ವಂಸಗೊಳಿಸಿದ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕನ ಹತ್ಯೆಗೆ ಪಿತೂರಿ ನಡೆದಿದೆ ಎಂದು ಎಎಪಿ ಆರೋಪಿಸಿದ ಮರುದಿನವೇ ಕೇಜ್ರಿವಾಲ್‌ ಈ ಹೇಳಿಕೆ ನೀಡಿದ್ದಾರೆ.

ಇಲ್ಲಿನ ಐಪಿ ಡಿಪೋದಲ್ಲಿ ಇ-ಆಟೋಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಇಂತಹ ಗೂಂಡಾಗಿರಿ ರಾಷ್ಟ್ರದ ಪ್ರಗತಿಗೆ ನೆರವಾಗುವುದಿಲ್ಲ. ಇದರಿಂದ ಜನರಿಗೆ ತಪ್ಪು ಸಂದೇಶವಷ್ಟೇ ರವಾನೆಯಾಗುತ್ತದೆ’ ಎಂದು, ಬಿಜೆಪಿಯ ಹೆಸರು ಉಲ್ಲೇಖಿಸಿದೆ ಟೀಕಿಸಿದರು.

‘ಅರವಿಂದ ಕೇಜ್ರಿವಾಲ್ ಮುಖ್ಯವಲ್ಲ. ಆದರೆ, ರಾಷ್ಟ್ರ ಮುಖ್ಯ. ನಾನೊಬ್ಬ ಚಿಕ್ಕ ಮತ್ತು ಸಾಮಾನ್ಯ ಮನುಷ್ಯ. ದೇಶಕ್ಕಾಗಿ ನಾನು ನನ್ನ ಪ್ರಾಣ ಕೊಡಬಲ್ಲೆ. ಇಂತಹ ಗೂಂಡಾಗಿರಿಯಿಂದ ದೇಶ ಎಂದಿಗೂ ಪ್ರಗತಿ ಸಾಧಿಸುವುದಿಲ್ಲ’ ಎಂದರು.

ಆಮ್‌ ಆದ್ಮಿ ಪಕ್ಷವನ್ನು ಸೋಲಿಸಲು ಸಾಧ್ಯವಾಗದಿದ್ದಕ್ಕೆ ಕೇಸರಿ ಪಕ್ಷವು ಕೇಜ್ರಿವಾಲ್‌ ಅವರ ಹತ್ಯೆಗೆ ಸಂಚು ಮಾಡಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೊಡಿಯಾ ಅವರು ಬುಧವಾರ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಕೇಜ್ರಿವಾಲ್ ಅವರು ನೀಡಿದ್ದ ಹೇಳಿಕೆ ಖಂಡಿಸಿ, ದೆಹಲಿಯಲ್ಲಿ ಬಿಜೆಪಿಯ ಯುವ ಮೋರ್ಚಾದ(ಬಿಜೆವೈಎಂ) ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಸುಮಾರು 200 ಕಾರ್ಯಕರ್ತರು, ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಕೇಜ್ರಿವಾಲ್ ಅವರ ಮನೆ ಹೊರಗೆ ಪ್ರತಿಭಟಿಸಿ, ಆಸ್ತಿಗೆ ಹಾನಿಗೊಳಿಸಿದ್ದರು.

ಎಎಪಿಯದು ಸಿದ್ಧ ನಾಟಕ: ನಿರಾಶ್ರಿತ ಕಾಶ್ಮೀರಿ ಪಂಡಿತರನ್ನು ಅಪಹಾಸ್ಯ ಮಾಡಿದ ಕೇಜ್ರಿವಾಲ್ ಅವರ ಹೇಳಿಕೆಗಳ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು,ಅದಕ್ಕಾಗಿ ಎಎಪಿಯಿಂದ ಇಂತಹ ಸಿದ್ಧ ನಾಟಕ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

‘ಈ ವಿಚಾರದಲ್ಲಿ ಬಲಿಪಶುಗಳು ಕಾಶ್ಮೀರಿ ಹಿಂದೂಗಳೇ ಹೊರತು ಎಎಪಿ ಮತ್ತು ಕೇಜ್ರಿವಾಲ್ ಅಲ್ಲ. ಇದು ನಗರ ನಕ್ಸಲರ ಸಮಯಸಾಧಕ ತಂತ್ರ. ನಮ್ಮ ಪ್ರತಿಭಟನೆಯು ಯಾವುದೇ ಪಕ್ಷದ ವಿರುದ್ಧವಲ್ಲ ಮತ್ತು ಇದು ಕೇವಲ ‘ದಿ ಕಾಶ್ಮೀರ್‌ ಫೈಲ್ಸ್’ಗೆ ಸಂಬಂಧಿಸಿದ್ದಲ್ಲ. ಕಾಶ್ಮೀರದಲ್ಲಿ ಹಿಂದೂ ನರಮೇಧ ನಡೆದಿರುವುದನ್ನು ಅಲ್ಲಗಳೆದಿರುವ ಕೇಜ್ರಿವಾಲ್ ಅವರ ಅಮಾನವೀಯ ಮನಸ್ಥಿತಿಯ ವಿರುದ್ಧದ್ದು’ ಎಂದು ತೇಜಸ್ವಿ ಸೂರ್ಯ ಹೇಳಿದರು.

ಎಸ್‌ಐಟಿ ತನಿಖೆಕೋರಿ ಎಎಪಿ ಶಾಸಕ ದೆಹಲಿ ಹೈಕೋರ್ಟ್‌ಗೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದ ಹೊರಗೆ ನಡೆದಿರುವ ದಾಂಧಲೆ ಬಗ್ಗೆ ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರಿ ಎಎಪಿ ಶಾಸಕ ಸೌರಭ್‌ ಭಾರದ್ವಾಜ್‌ ಗುರುವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮುಖ್ಯಮಂತ್ರಿ ಮತ್ತು ಅವರ ನಿವಾಸದ ಭದ್ರತೆ ಖಾತ್ರಿಪಡಿಸಿಕೊಳ್ಳಲು ದೆಹಲಿ ಪೊಲೀಸರು ಮತ್ತು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿರುವ ಈ ಅರ್ಜಿ ಶುಕ್ರವಾರ ವಿಚಾರಣೆಗೆ ಬರುವ ನಿರೀಕ್ಷೆ ಇದೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೀಡಿದ್ದ ಹೇಳಿಕೆಗಳನ್ನು ವಿರೋಧಿಸಿ ಬಿಜೆಪಿ ಯುವ ಘಟಕದ ಸದಸ್ಯರು, ಎಎಪಿ ಸಂಚಾಲಕರೂ ಆದ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಆಸ್ತಿ ಧ್ವಂಸಗೊಳಿಸಿದ್ದಾರೆ ಎಂದು ಎಎಪಿ ಆರೋಪಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಪರಿಚಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT