ಮಂಗಳವಾರ, ಮಾರ್ಚ್ 28, 2023
30 °C

ದೆಹಲಿ ಅಬಕಾರಿ ನೀತಿ ಹಗರಣ: 25 ಕಡೆ ಇ.ಡಿ ಶೋಧ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿಯ ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾಗಿರುವ ಹಣ ಅಕ್ರಮ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ದೆಹಲಿಯ 25 ಕಡೆಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದ ಖಾಸಗಿ ಘಟಕಗಳ ಸ್ಥಳಗಳಲ್ಲಿ ಈ ಶೋಧ ನಡೆದಿದೆ ಎಂದು ಅವರು ಹೇಳಿದ್ದಾರೆ. 

ಜಾರಿ ನಿರ್ದೇಶನಾಲಯವು ಈ ಹಗರಣಕ್ಕೆ ಸಂಬಂಧಿಸಿ ಇದುವರೆಗೂ ಹಲವು ಬಾರಿ ಶೋಧ ನಡೆಸಿದೆ. ಅಲ್ಲದೆ, ಕಳೆದ ತಿಂಗಳು ‘ಇಂಡೊಸ್ಪಿರಿಟ್‌’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಉದ್ಯಮಿ ಸಮೀರ್ ಮಹಾಂದ್ರು ಅವರನ್ನು ಬಂಧಿಸಿದೆ.

ಬಾಂಬ್‌ ಬೆದರಿಕೆ: ರಷ್ಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ (ಪಿಟಿಐ): ಬಾಂಬ್‌ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರಷ್ಯಾದ ಮಾಸ್ಕೊದಿಂದ ದೆಹಲಿಗೆ ಬರುತ್ತಿದ್ದ ವಿಮಾನವು ಶುಕ್ರವಾರ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತು.

‘ಏರೊಫ್ಲೋಟ್‌ ವಿಮಾನದಲ್ಲಿ 386 ಮಂದಿ ಪ್ರಯಾಣಿಕರು ಹಾಗೂ 14 ಮಂದಿ ಸಿಬ್ಬಂದಿ ಸೇರಿ ಒಟ್ಟು 400 ಮಂದಿ ‍ಪ್ರಯಾಣಿಸುತ್ತಿದ್ದರು. ಗುರುವಾರ ತಡರಾತ್ರಿ 2.48 ಹೊತ್ತಿಗೆ ವಿಮಾನವು ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿಯಿತು’ ಎಂದು ಅಧಿಕಾರಿಗಳು ತಿಳಿಸಿದರು.

‘ಕೇಂದ್ರೀಯ ಕೈಗಾರಿಕಾ ಸುರಕ್ಷಾ ಪಡೆಗೆ (ಸಿಐಎಸ್‌ಎಫ್‌) ಇ–ಮೇಲ್‌ ಮೂಲಕ ವಿಮಾನದಲ್ಲಿ ಬಾಂಬ್‌ ಇರುವುದಾಗಿ ಗುರುವಾರ ರಾತ್ರಿ ಬೆದರಿಕೆ ಸಂದೇಶ ಬಂದಿತ್ತು’ ಎಂದರು.

‘ತಕ್ಷಣದಲ್ಲೇ 400 ಮಂದಿ ವಿಮಾನದಿಂದ ಕೆಳಗಿಳಿಸಿ, ತಪಾಸಣೆ ಮಾಡಲಾಯಿತು. ಆದರೆ, ಬಾಂಬ್‌ ಮಾಹಿತಿ ದೊರೆಯಲಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು