ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಕೇಜ್ರಿವಾಲ್ ರಾಜೀನಾಮೆಗೆ ಬಿಜೆಪಿ, ಕಾಂಗ್ರೆಸ್ ಆಗ್ರಹ

Last Updated 4 ಫೆಬ್ರುವರಿ 2023, 13:11 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೆಸರನ್ನು ಸೇರಿಸಲಾಗಿದೆ. ಈ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು, ಕೇಜ್ರಿವಾಲ್ ರಾಜೀನಾಮೆಗೆ ಶನಿವಾರ ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಆಮ್‌ ಆದ್ಮಿ ಪಕ್ಷದ (ಎಎಪಿ) ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಎಎಪಿ ಸರ್ಕಾರದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯಲ್ಲಿ ಕೇಜ್ರಿವಾಲ್‌ ಅವರ ಹೆಸರಿದೆ. ಅವರು (ಅರವಿಂದ ಕೇಜ್ರಿವಾಲ್) ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಆಗ್ರಹಿಸಿದ್ದಾರೆ.

ಗೆದ್ದಲು ಹುಳುವಿನ ಹಾಗೆ ದೆಹಲಿಯನ್ನು ದುರ್ಬಲಗೊಳಿಸುತ್ತಿರುವ ಕೇಜ್ರಿವಾಲ್‌ ಸರ್ಕಾರದ ಭ್ರಷ್ಟಾಚಾರವನ್ನು ಬಿಜೆಪಿಯು ಬಯಲಿಗೆಳೆಯುತ್ತಲೇ ಇರುತ್ತದೆ. 'ಅವರಲ್ಲಿ (ಅರವಿಂದ ಕೇಜ್ರಿವಾಲ್‌ಗೆ) ನೈತಿಕತೆ ಇದ್ದರೆ, ಈಗಲೇ ರಾಜೀನಾಮೆ ನೀಡಬೇಕು' ಎಂದೂ ಅವರು ಪ್ರತಿಭಟನೆ ವೇಳೆ ಹೇಳಿದ್ದಾರೆ.

'ಕೇಜ್ರಿವಾಲ್‌ ಅವರ ರಕ್ಷಣೆಯಲ್ಲಿಯೇ ಅಬಕಾರಿ ಹಗರಣ ನಡೆದಿದೆ ಎಂದು ಬಿಜೆಪಿ ಹೇಳುತ್ತಲೇ ಇದೆ. ಇ.ಡಿ ಆರೋಪ ಪಟ್ಟಿ ಮೂಲಕ ಅದು ಈಗ ಸಾಬೀತಾಗಿದೆ' ಎಂದು ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ರಾಮ್‌ವೀರ್‌ ಸಿಂಗ್‌ ಬಿಧುರಿ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಅಜಯ್‌ ಮಾಕೆನ್‌ ಅವರು, ಇ.ಡಿ. ಆರೋಪ ಪಟ್ಟಿಯಲ್ಲಿ ಕೇಜ್ರಿವಾಲ್ ಹಾಗೂ ಅವರ ಸಚಿವರ ವಿರುದ್ಧ ₹ 100 ಕೋಟಿ ಕಿಕ್‌ಬ್ಯಾಕ್‌ ಆರೋಪ ಮಾಡಲಾಗಿದೆ. ಇದನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯವು ಪರಿಗಣಿಸಲಿದೆ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ ಸಚಿವರಾದ ಮನೀಶ್‌ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್‌ ಅವರೊಂದಿಗೆ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತದೆ. ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕ ಹಕ್ಕೂ ಅವರಿಗಿಲ್ಲ ಎಂದು ಟೀಕಿಸಿದ್ದಾರೆ.

ಈ ಆರೋಪಗಳಿಗೆ ಸಂಬಂಧಿಸಿದಂತೆ ಎಎಪಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇ.ಡಿ ಸಲ್ಲಿಸಿರುವ ಪೂರಕ ಆರೋಪ ಪಟ್ಟಿಯಲ್ಲಿ, ಅಬಕಾರಿ ನೀತಿಯಿಂದ ಪಡೆದ ₹ 100 ಕೋಟಿ 'ಕಿಕ್‌ಬ್ಯಾಕ್‌' ಅನ್ನು 2022ರಲ್ಲಿ ಗೋವಾದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇ.ಡಿ ಚಾರ್ಜ್‌ಶೀಟ್‌ ಅನ್ನು ಅಲ್ಲಗಳೆದಿರುವ ಕೇಜ್ರಿವಾಲ್‌, ತನಿಖಾ ಸಂಸ್ಥೆ ದಾಖಲಿಸಿರುವ ಎಲ್ಲ ಪ್ರಕರಣಗಳೂ ನಕಲಿ. ಸರ್ಕಾರವನ್ನು ಉರುಳಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT