ಭಾನುವಾರ, ಫೆಬ್ರವರಿ 5, 2023
21 °C
ಏರ್‌ ಪ್ಯೂರಿಫೈಯರ್‌ಗೆ ಹೆಚ್ಚಿದ ಬೇಡಿಕೆ

ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿತ: ಶಾಲೆಗಳಿಗೆ ರಜೆ ನೀಡಲು ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಧಾನಿಯ ವಾಯು ಗುಣಮಟ್ಟ ತೀವ್ರ ಹದಗೆಟ್ಟಿರುವ ಕಾರಣ ಇಲ್ಲಿನ ಪ್ರಾಥಮಿಕ ಶಾಲೆಗಳಿಗೆ ಶನಿವಾರದಿಂದ ರಜೆ ನೀಡಿ ದೆಹಲಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಮುಂದಿನ ಆದೇಶದ ವರೆಗೂ ಶಾಲೆ ತೆರೆಯುವಂತಿಲ್ಲ ಎಂದೂ ಹೇಳಿದೆ.

‘ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುತ್ತದೆ. ಐದನೇ ತರಗತಿಯ ನಂತರದ ಮಕ್ಕಳ ಹೊರಾಂಗಣ ತರಗತಿಗಳನ್ನು ವಜಾ ಮಾಡಲಾಗುವುದು. ಜೊತೆಗೆ ಹಿರಿಯ ನಾಗರಿಕ ಹೊರಾಂಗಣ ಚಟುಕಟಿಕೆಗಳಿಗೆ ನಿಯಂತ್ರಣ ಹೇರಲಾಗುವುದು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ತೀವ್ರ ಮಾಲಿನ್ಯ: ಶುಕ್ರವಾರ ಮಧ್ಯಾಹ್ನ 2ರ ವೇಳೆಗೆ 445 ಅಂಕಗಳೊಂದಿಗೆ ದೆಹಲಿಯು ವಾಯು ಗುಣಮಟ್ಟದಲ್ಲಿ ಮಾಲಿನ್ಯ ‘ತೀವ್ರ’ವಾಗಿರುವ ಪ್ರದೇಶದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಸತತ ಎರಡು ದಿನಗಳಿಂದ ದೆಹಲಿ ಇದೇ ಪ್ರದೇಶದಲ್ಲಿದೆ.

ಏರ್‌ ಪ್ಯೂರಿಫೈಯರ್‌ಗೆ ಹೆಚ್ಚಿದ ಬೇಡಿಕೆ: ಒಂದು ಕಾಲದಲ್ಲಿ ಐಷಾರಾಮಿ ಉತ್ಪನ್ನವಾಗಿದ್ದ ಏರ್‌ ಪ್ಯೂರಿಫೈಯರ್‌, ಇಂದು ದೆಹಲಿ ಜನರ ಅಗತ್ಯವಾಗಿದೆ. ದೀಪಾವಳಿ ನಂತರದಲ್ಲಿ ಏರ್‌ ಪ್ಯೂರಿಫೈಯರ್‌ಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಂಪನಿಗಳು ತಿಳಿಸಿವೆ.

‘ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಏರ್ ಪ್ಯೂರಿಫೈಯರ್‌ ಕಂಪನಿಗಳು ತಮ್ಮ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರುತ್ತಿವೆ. ಹಿಂದೆ ₹15 ಸಾವಿರದಿಂದ 20 ಸಾವಿರ ಇದ್ದ ಬೆಲೆ, ಈಗ ₹7 ಸಾವಿರದಿಂದ ₹8 ಸಾವಿರವಾಗಿದೆ. ಆನ್‌ಲೈನ್‌ ಮೂಲಕವಾಗಿ ಜನರು ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದ್ದಾರೆ’ ಎಂದು ಎಲೆಕ್ಟ್ರಿಕಲ್‌ ಅಂಗಡಿಯೊಂದ ಮಾಲೀಕ ಮನೀಶ್‌ ಶೇಟ್‌ ತಿಳಿಸಿದರು.

ಎನ್‌ಸಿಆರ್‌ ಸೂಚನೆ: ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಹದಗೆಟ್ಟಿರುವ ವಾಯು ಗುಣಮಟ್ಟದ ಕುರಿತು ನವೆಂಬರ್‌ 10ರಂದು ನಡೆಸಲಾಗುವ ಸಭೆಗೆ ಹಾಜರಾಗವಂತೆ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಯ ಮುಖ್ಯ ಕಾರ್ಯದರ್ಶಿ ಅವರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.

ವಾಯುಗುಣಮಟ್ಟವನ್ನು ಸುಧಾರಿಸುವ, ಭತ್ತದ ಹಲ್ಲನ್ನು ಸುಡದಂತೆ ತಡೆಯುವ ಬಗ್ಗೆ ತೆಗೆದುಕೊಂಡು ಕ್ರಮಗಳ ಬಗ್ಗೆ ಈ ನಾಲ್ಕು ರಾಜ್ಯಗಳು ಒಂದು ವಾರದೊಳಗೆ ಮಾಹಿತಿ ನೀಡಬೇಕು ಎಂದು ಆಯೋಗ ಹೇಳಿದೆ.

‘ಕೃಷಿತ್ಯಾಜಕ್ಕೆ ಬೆಂಕಿ: ನಾವೇ ಜವಾಬ್ದಾರರು’
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್‌ ಅವರು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಪಂಜಾಬ್‌ನಲ್ಲಿ ಕೃಷಿತಾಜ್ಯಕ್ಕೆ ಬೆಂಕಿ ಹಾಕುತ್ತಿರುವುದರ ಹೊಣೆಯನ್ನು ಹೊತ್ತುಕೊಳ್ಳುತ್ತೇವೆ. ಮುಂದಿನ ಚಳಿಗಾಲದ ವೇಳೆಗೆ ಕೃಷಿತಾಜ್ಯಕ್ಕೆ ಬೆಂಕಿ ಹಚ್ಚುವುದನ್ನು ನಿಯಂತ್ರಿಸುತ್ತೇವೆ ಎಂದರು.

‘ಇದು ದೆಹಲಿಗೆ ಮಾತ್ರ ಸಂಬಂಧಿಸಿದ ಸಮಸ್ಯೆಯಲ್ಲ. ಇದು ಇಡೀ ಉತ್ತರ ಭಾರತದ ಸಮಸ್ಯೆಯಾಗಿದೆ. ಆದ್ದರಿಂದ ಈ ವಿಷಯವನ್ನು ರಾಜಕೀಯ ಹೋಯ್ದಾಟ ಮಾಡುವುದು ಸರಿಯಲ್ಲ’ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದರು.

‘ಕೃಷಿತಾಜ್ಯಗಳಿಗೆ ಬೆಂಕಿ ಇಡುತ್ತಿರುವ ಕುರಿತು ರೈತರನ್ನು ಜವಾಬ್ದಾರರನ್ನಾಗಿ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು