ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ: ಮಹಿಳೆಯ ಆಯ್ಕೆಯೇ ಅಂತಿಮ -ದೆಹಲಿ ನ್ಯಾಯಾಲಯ

Last Updated 6 ಡಿಸೆಂಬರ್ 2022, 14:16 IST
ಅಕ್ಷರ ಗಾತ್ರ

ನವದೆಹಲಿ: ‘ಗರ್ಭಪಾತದ ಹಕ್ಕು ಮಹಿಳೆಯದ್ದೋ ಇಲ್ಲವೋ ಎನ್ನುವ ಚರ್ಚೆ ಜಗತ್ತಿನೆಲ್ಲೆಡೆ ಇದೆ. ಆದರೆ, ಭಾರತದ ಕಾನೂನು ಗರ್ಭಪಾತದ ಹಕ್ಕನ್ನು ಮಹಿಳೆಗೇ ನೀಡುತ್ತದೆ’ ಎಂದು ದೆಹಲಿ ನ್ಯಾಯಾಲಯ ಮಂಗಳವಾರ ಹೇಳಿದೆ.

ಮಗುವಿಗೆ ಜನ್ಮ ನೀಡುವುದು ಮತ್ತು ಇನ್ನೂ ಜನ್ಮತಾಳದ ಮಗುವಿನ ಘನತೆಯ ಬದುಕಿನ ಸಾಧ್ಯತೆಯ ಕುರಿತು ‘ಅಂತಿಮ ನಿರ್ಧಾರ’ ತೆಗೆದುಕೊಳ್ಳುವ ಹಕ್ಕು ತಾಯಿಯದ್ದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, 33 ವಾರಗಳ ಭ್ರೂಣದ ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳಲು26 ವರ್ಷದ ವಿವಾಹಿತ ಮಹಿಳೆಗೆ ಅನುಮತಿ ನೀಡಿತು.

ಜಿಟಿಬಿ ಆಸ್ಪತ್ರೆಯು ಗರ್ಭಪಾತಕ್ಕೆ ನಿರಾಕರಿಸಿದ ಬಳಿಕ ಮಹಿಳೆಯು, ಕಳೆದ ವಾರ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ವೈದ್ಯಕೀಯ ಗರ್ಭಪಾತಕಾಯ್ದೆಯ ಪ್ರಕಾರ ಗರ್ಭಪಾತ ಮಾಡಿಸಿಕೊಳ್ಳಲು ಭ್ರೂಣಕ್ಕೆ 24 ವಾರ ತುಂಬುವುದರೊಳಗೆ ಮಾತ್ರ ಅವಕಾಶ ಇದೆ. ಆದರೆ, ಈ ಪ್ರಕರಣದಲ್ಲಿ ಭ್ರೂಣಕ್ಕೆ 33 ವಾರಗಳಾಗಿತ್ತು. ಈ ಕಾರಣದಿಂದಾಗಿ ಆಸ್ಪತ್ರೆಯು ಗರ್ಭಪಾತ ಮಾಡಲು ನಿರಾಕರಿಸಿತ್ತು.

16 ವಾರದವರೆಗೂ ಭ್ರೂಣದಲ್ಲಿ ಯಾವುದೇ ಅಸಹಜತೆ ಕಂಡುಬಂದಿರಲಿಲ್ಲ. ಆದರೆ, ನ.12ರಂದು ಸ್ಕ್ಯಾನ್‌ ಮಾಡಿಸಿದಾಗ ಭ್ರೂಣದಲ್ಲಿ ಅಸಹಜತೆ ಕಂಡುಬಂದಿತು. ಆದ್ದರಿಂದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಮಹಿಳೆಯು ಅರ್ಜಿಯಲ್ಲಿ ಕೋರಿದ್ದರು.

‘ಜನ್ಮ ತಾಳಿದ ಬಳಿಕ ಮಗುವಿನಲ್ಲಿ ಯಾವ ಪ್ರಮಾಣದ ಅಂಗವಿಕಲತೆ ಇರಲಿದೆ ಹಾಗೂ ಮಗುವಿನ ಭವಿಷ್ಯ ಯಾವ ರೀತಿ ಇರಲಿದೆ ಎನ್ನುವ ಕುರಿತು ವೈದ್ಯಕೀಯ ಮಂಡಳಿಯು ತನ್ನ ಅಭಿಪ್ರಾಯವನ್ನು ನೀಡಿಲ್ಲ. ಆದ್ದರಿಂದ ಇಂಥ ಸಮಯದಲ್ಲಿ ಮಹಿಳೆಯ ಅಭಿಪ್ರಾಯವೇ ಮುಖ್ಯವಾಗಬೇಕು’ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಅಭಿಪ್ರಾಯಪಟ್ಟರು.

‘ನೈತಿಕ ಕಣ್ಣಿನಿಂದಲೂ ನೋಡಿ’
‘ಅಸಹಜತೆಯಿಂದ ಕೂಡಿದ ಮಗುವು ಹುಟ್ಟಿದ ಬಳಿಕ ಪೋಷಕರಿಗೆ ಆಗಬಹುದಾದ ಮಾನಸಿಕ ಹಿಂಸೆ, ಅವರು ಎದುರಿಸಬಹುದಾದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ನಾವು ಅಂದಾಜು ಮಾಡಬಲ್ಲೆವು. ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ಅರ್ಜಿದಾರರು ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿಸಲ್ಲಿಸಿದ್ದಾರೆ’ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಹೇಳಿದರು.

‘ಗರ್ಭಪಾತದಂಥ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯೊಬ್ಬಳು ಎಂಥ ತೀವ್ರತರವಾದ ಸಂದಿಗ್ಧದಲ್ಲಿ ಇರುತ್ತಾಳೆ ಎನ್ನುವುದು ತಿಳಿದಿದೆ. ಇಂಥ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಧೀಶರು, ಪ್ರಕರಣವನ್ನು ಕೇವಲ ವಾಸ್ತವ ಅಥವಾ ಕಾನೂನು ಪರಿಭಾಷೆಯಲ್ಲೇ ನೋಡಬೇಕಾಗಿಲ್ಲ. ಬದಲಿಗೆ ನೈತಿಕತೆಯ ಕಣ್ಣಿನಿಂದಲೂ ನೋಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT