ನವದೆಹಲಿ: ಆಮ್ ಆದ್ಮಿ ಪಕ್ಷವು(ಎಎಪಿ) ಸರ್ಕಾರಿ ಜಾಹೀರಾತುಗಳ ಸೋಗಿನಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳಿಗಾಗಿ ಬಳಸಿದ ₹97 ಕೋಟಿಯನ್ನು ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ದೆಹಲಿ ಸರ್ಕಾರದ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ₹ 97.14 ಕೋಟಿ (ರೂ. 97,14,69,137) ಹಣವನ್ನು ಅನುರೂಪವಲ್ಲದ ಜಾಹೀರಾತುಗಳ ಖಾತೆಯಲ್ಲಿ ಖರ್ಚು ಮಾಡಿದೆ ಎಂದು ಮೂಲಗಳು ಹೇಳಿವೆ.
‘ಇದರಲ್ಲಿ, ₹42.26 ಕೋಟಿಗಿಂತ ಹೆಚ್ಚಿನ ಮೊತ್ತದ ಪಾವತಿಗಳನ್ನು ಡಿಐಪಿ ಈಗಾಗಲೇ ಬಿಡುಗಡೆ ಮಾಡಿದ್ದರೆ, ಪ್ರಕಟಿಸಿದ ಜಾಹೀರಾತುಗಳಿಗಾಗಿ ₹54.87ಕೋಟಿ ಬಿಡುಗಡೆ ಬಾಕಿ ಇದೆ’ಎಂದು ಮೂಲವೊಂದು ತಿಳಿಸಿದೆ.
ಲೆಫ್ಟಿನೆಂಟ್ ಗವರ್ನರ್ ನಿರ್ದೇಶನದ ಮೇರೆಗೆ 2017ರಲ್ಲೇ ₹42.26 ಕೋಟಿಯನ್ನು ರಾಜ್ಯ ಖಜಾನೆ ಇಲಾಖೆಗೆ ಮರು ಪಾವತಿಸುವಂತೆ ಎಎಪಿಗೆ ದಿಐಪಿ ಸೂಚಿಸಿದೆ. ಜೊತೆಗೆ ಜಾಹೀರಾತು ಸಂಸ್ಥೆಗಳಿಗೆ ಬಾಕಿ ಇರುವ ₹54.87 ಕೋಟಿ ಹಣವನ್ನು ನೇರವಾಗಿ ಪಾವತಿಸುವಂತೆ ಸೂಚಿಸಲಾಗಿದೆ.
‘ಈ ನಿಯಮ ಉಲ್ಲಂಘನೆಯಾಗಿ 5 ವರ್ಷ 8 ತಿಂಗಳು ಕಳೆದಿದ್ದರೂ ಸಹ ಎಎಪಿಯು ಡಿಐಪಿ ಆದೇಶದ ಪಾಲನೆ ಮಾಡಿಲ್ಲ. ಇದು ಸಾರ್ವಜನಿಕರ ಹಣವಾಗಿದ್ದು, ನಿರ್ದಿಷ್ಟ ಆದೇಶದ ಬಳಿಕವೂ ಸರ್ಕಾರಿ ಖಜಾನೆಗೆ ಪಕ್ಷ ಹಣ ಮರು ಪಾವತಿ ಮಾಡದಿರುವುದು ಗಂಭೀರ ವಿಷಯವಾಗಿದೆ. ಒಂದು ರಾಜಕೀಯ ಪಕ್ಷವು ಈ ರೀತಿ ಮಾಡುವುದು ಕಾನೂನಿನ ಉಲ್ಲಂಘನೆಯಷ್ಟೇ ಅಲ್ಲದೆ, ಉತ್ತಮ ಆಡಳಿತದ ದೃಷ್ಟಿಯಿಂದ ಸೂಕ್ತವಲ್ಲ’ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.