ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಹ್ಲಾ ರಶೀದ್‌ ವಿರುದ್ಧ ಕಾನೂನುಕ್ರಮಕ್ಕೆ ಲೆಫ್ಟಿನೆಂಟ್‌ ಗವರ್ನರ್ ಅನುಮತಿ

Last Updated 10 ಜನವರಿ 2023, 10:56 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸೇನೆ ಕುರಿತು ಟ್ವೀಟ್‌ ಮಾಡಿದ್ದ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಶೋರಾ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

2019ರ ಆಗಸ್ಟ್‌ 18ರಂದು ಟ್ವೀಟ್ ಮಾಡಿದ್ದ ಶೆಹ್ಲಾ, ‘ಸೇನೆಯು ಕಾಶ್ಮೀರದಲ್ಲಿ ಮನೆಗಳಿಗೆ ನುಗ್ಗಿ ಸ್ಥಳೀಯರಿಗೆ ಹಿಂಸೆ ನೀಡುತ್ತಿದೆ’ ಎಂದು ಆರೋಪಿಸಿದ್ದರು.

ಮತ್ತೊಂದು ಟ್ವೀಟ್‌ ಮಾಡಿದ್ದ ಅವರು, ‘ಶೋಪಿಯಾನ್‌ನಲ್ಲಿ ನಾಲ್ವರು ಪುರುಷರನ್ನು ಸೇನೆಯ ಶಿಬಿರಕ್ಕೆ ಕರೆಸಿಕೊಳ್ಳಲಾಗಿತ್ತು. ಅವರಿಗೆ ಚಿತ್ರಹಿಂಸೆ ನೀಡುವ ಮೂಲಕ ವಿಚಾರಣೆಗೆ ಒಳಪಡಿಸಲಾಯಿತು. ಅವರ ಬಳಿಯೇ ಮೈಕ್‌ ಇಡಲಾಗಿತ್ತು. ಆ ಮೂಲಕ ಅವರ ನೋವಿನ ನರಳಾಟ ಸುತ್ತಮುತ್ತಲಿನ ಪ್ರದೇಶದವರಿಗೆ ಕೇಳುವಂತೆ ಮಾಡಲಾಗಿತ್ತು. ಈ ಕೃತ್ಯ ಇಡೀ ಆ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು’ ಎಂದು ಹೇಳಿದ್ದರು.

ಆದರೆ, ತನ್ನ ವಿರುದ್ಧದ ಈ ಆರೋಪಗಳು ನಿರಾಧಾರ ಎಂದು ಸೇನೆ ಹೇಳಿತ್ತು.

‘ಅಮಾಯಕ ಜನರಲ್ಲಿ ದ್ವೇಷ ಭಾವನೆ ಕೆರಳಿಸಲು ಪೂರ್ವಗ್ರಹ ಪೀಡಿತ ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳು, ಪರಿಶೀಲನೆ ಮಾಡದ ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ಹೇಳುವ ಮೂಲಕ ಸೇನೆ ತನ್ನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿತ್ತು.

ಶೆಹ್ಲಾ ಅವರ ವಿರುದ್ಧ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಎಂಬುವವರು ದೂರು ದಾಖಲಿಸಿದ್ದರು. ಅದರ ಮೇರೆಗೆ, ಶೆಹ್ಲಾ ವಿರುದ್ಧ ಐಪಿಸಿ ಸೆಕ್ಷನ್ 153ಎ ಅಡಿ 2019ರ ಸೆಪ್ಟೆಂಬರ್ 3ರಂದು ಎಫ್‌ಐಆರ್‌ ದಾಖಲಿಸಲಾಗಿತ್ತು.

ಶೆಹ್ಲಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅನುಮತಿ ಕೋರಿ ದೆಹಲಿ ಪೊಲೀಸರು ಪ್ರಸ್ತಾವ ಸಲ್ಲಿಸಿದ್ದರು. ನಂತರ, ದೆಹಲಿ ಗೃಹ ಇಲಾಖೆಯು ಈ ಸಂಬಂಧ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಶಿಫಾರಸು ಮಾಡಿತ್ತು.

‘ದೂರುಗಳ ಸ್ವರೂಪ, ಟ್ವೀಟ್‌ನಲ್ಲಿ ಪ್ರಸ್ತಾಪಿಸಿರುವ ಸ್ಥಳ ಹಾಗೂ ಸೇನೆ ವಿರುದ್ಧದ ಸುಳ್ಳು ಆರೋಪಗಳ ಹಿನ್ನೆಲೆಯಲ್ಲಿ ಇದೊಂದು ಗಂಭೀರ ಪ್ರಕರಣವೆನಿಸಿದೆ’ ಎಂದು ಗೃಹ ಇಲಾಖೆ ಅಭಿಪ್ರಾಯಪಟ್ಟಿತ್ತು.

‘ಎಲ್ಲಾ ಟ್ವೀಟ್‌ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿಲ್ಲ. ಆದರೆ, ಶೆಹ್ಲಾ ಅವರ ಟ್ವೀಟ್‌ಗಳು ಜಮ್ಮು–ಕಾಶ್ಮೀರದಲ್ಲಿ ಧಾರ್ಮಿಕ ನೆಲೆಯಲ್ಲಿ ಜನರ ನಡುವೆ ಕಂದಕ ಸೃಷ್ಟಿಸುವಂತಿವೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153ಎ ಅಡಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದೂ ಇಲಾಖೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT