ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ – ಮೋದಿ ನಂಟು ಮುಚ್ಚಿಕೊಳ್ಳಲು ಸಿಸೋಡಿಯಾ ಬಂಧನ: ಬಿಆರ್‌ಎಸ್‌ ಪಕ್ಷ ಆರೋಪ

Last Updated 27 ಫೆಬ್ರುವರಿ 2023, 13:49 IST
ಅಕ್ಷರ ಗಾತ್ರ

ಹೈದರಾಬಾದ್‌: ಷೇರು ಅಕ್ರಮದಲ್ಲಿ ಸಿಲುಕಿರುವ ಗೌತಮ್‌ ಅದಾನಿ – ಪ್ರಧಾನಿ ಮೋದಿ ನಂಟು ಮುಚ್ಚಿಕೊಳ್ಳಲು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷ ಆರೋಪಿಸಿದೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ. ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಎಂಟು ತಾಸು ವಿಚಾರಣೆಗೆ ಒಳಪಡಿಸಿದ ಸಿಬಿಐ ಅಧಿಕಾರಿಗಳು, ಬಳಿಕ ಅವರನ್ನು ಬಂಧಿಸಿದರು.

ವಿಚಾರಣೆ ವೇಳೆ ಸಿಸೋಡಿಯಾ ಅವರು ನೀಡಿದ ಉತ್ತರಗಳು ತೃಪ್ತಿಕರವಾಗಿ ಇರಲಿಲ್ಲ, ಈ ಕಾರಣಕ್ಕೆ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸುವ ಅಗತ್ಯ ಉಂಟಾಯಿತು ಎಂದು ಸಿಬಿಐ ತಿಳಿಸಿದೆ. ಇನ್ನೊಂದೆಡೆ, ಸಿಸೋಡಿಯಾ ಅವರನ್ನು ಐದು ದಿನಗಳ ಸಿಬಿಐ ಕಸ್ಟಡಿಗೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಬಿಆರ್‌ಎಸ್‌, ಸಿಸೋಡಿಯಾ ಅವರ ಬಂಧನವನ್ನು ಖಂಡಿಸಿದೆ.

‘ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನವನ್ನು ನಾವು ಖಂಡಿಸುತ್ತೇವೆ. ಇದು ಅದಾನಿ - ಮೋದಿ ನಂಟಿನಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡಿದ ಪ್ರಯತ್ನವಲ್ಲದೇ ಬೇರೇನೂ ಅಲ್ಲ’ ಎಂದು ಬಿಆರ್‌ಎಸ್‌ ಆರೋಪಿಸಿದೆ.

ಅದಾನಿ ಸಮೂಹದ ಷೇರು ಅಕ್ರಮದ ಕುರಿತು ಇತ್ತೀಚೆಗೆ ಹಿಂಡನ್‌ ಬರ್ಗ್‌ ಎಂಬ ಸಂಶೋಧನಾ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು.

ಅದಾನಿ ಸಮೂಹವು ‘ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ಲಜ್ಜೆಯಿಲ್ಲದೆ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ’ ಎಂದು ಹಿಂಡನ್‌ಬರ್ಗ್‌ ಆರೋಪಿಸಿತ್ತು.

ತೆರಿಗೆ ವಂಚಕರ ಪಾಲಿಗೆ ಸ್ವರ್ಗವೆಂದು ಕರೆಸಿಕೊಂಡಿರುವ ಸಾಗರದಾಚೆಯ ನಾಡುಗಳನ್ನು ಸಮೂಹವು ಶೆಲ್ ಕಂಪನಿಗಳ ಮೂಲಕ ‘ಸರಿಯಲ್ಲದ ರೀತಿಯಲ್ಲಿ’ ಬಳಸಿಕೊಂಡಿದೆ ಎಂದು ಕೂಡ ಅದು ಆರೋಪಿಸಿದೆ.

ಅದಾನಿ ಸಮೂಹಕ್ಕೆ ಸೇರಿದ, ಷೇರುಪೇಟೆ ನೋಂದಾಯಿತ ಕಂಪನಿಗಳ ಸಾಲದ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇದೆ. ಇದರಿಂದಾಗಿ ಇಡೀ ಸಮೂಹದ ಹಣಕಾಸಿನ ಸ್ಥಿತಿ ಅಪಾಯದಲ್ಲಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.

ವರದಿ ಬಹಿರಂಗವಾಗುತ್ತಲೇ ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪರಿಣಾಮವಾಗಿ ಅದಾನಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 30ನೇ ಸ್ಥಾನಕ್ಕೆ ಜಾರಿದ್ದಾರೆ.

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ವರದಿ ಬಿಡುಗಡೆ ಆದ ಬಳಿಕ ಅದಾನಿ ಸಂಪತ್ತು ₹ 6.64 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. ವರದಿ ಬಿಡುಗಡೆಗೂ ಮೊದಲು ಅವರ ಸಂಪತ್ತು ಮೌಲ್ಯವು ₹9.96 ಲಕ್ಷ ಕೋಟಿಯಷ್ಟು ಇತ್ತು. ಆದರೆ ಇದೀಗ ಅವರ ಸಂಪತ್ತು ಮೌಲ್ಯ ₹3.32 ಲಕ್ಷ ಕೋಟಿಗೆ ಇಳಿಕೆ ಆಗಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 30ನೇ ಸ್ಥಾನಕ್ಕೆ ಕುಸಿಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT